ಏಕಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಜಾಗೃತಿ ಅಗತ್ಯ

eswar
Published on

ಚಾಮರಾಜನಗರ: ಇತ್ತೀಚೆಗೆ ಏಕಬಳಕೆ ಪ್ಲಾಸ್ಟಿಕ್ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಅದರ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವ ನಿಟ್ಟಿನಲ್ಲಿ ಜಾಗೃತಿ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ತಿಳಿಸಿದರು.

ಜು.3 ರಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್‌ಮುಕ್ತ ದಿನ ಆಚರಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದಲ್ಲಿ ಹಾನಿಯುಂಟಾಗುತ್ತಿದೆ. ರಸ್ತೆಯಲ್ಲಿ ಬಿಸಾಡುವ ಪ್ಲಾಸ್ಟಿಕ್‌ಗಳನ್ನು ತಿಂದು ಪ್ರಾಣಿಗಳು ಮೃತಪಡುತ್ತಿವೆ. ನದಿಯಲ್ಲಿ ವಾಸಿಸುವ ಜಲಚರ ಪ್ರಾಣಿಗಳಿಗೂ ಇದು ಕುತ್ತು ತರುತ್ತಿದೆ. ಮನುಷ್ಯನಿಗೆ ಚರ್ಮ ಕಾಯಿಲೆ, ಉಸಿರಾಟದ ತೊಂದರೆ ಹಾಗೂ ಕ್ಯಾನ್ಸರ್ ಕಾಯಿಲೆಗೂ ಪ್ಲಾಸ್ಟಿಕ್ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಬಟ್ಟೆ ಬ್ಯಾಗ್‌ಗಳನ್ನು ಹೆಚ್ಚು ಬಳಕೆ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಈಶ್ವರೀಯ ವಿಶ್ವವಿದ್ಯಾಲಯದ ಧಾನೇಶ್ವರಿ ಮಾತನಾಡಿ, ಪರಿಸರ ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯಕ. ಪ್ಲಾಸ್ಟಿಕ್ ಬಳಕೆ ಚಾರಿತ್ರಿಕ ಸಮಸ್ಯೆಯಾಗಿದೆ. ಯಾವುದೇ ಕಾರ್ಯ ನಮ್ಮಿಂದಲೇ ಶುರುವಾಗಬೇಕು. ನಮ್ಮ ಮನೆಗಳಲ್ಲಿ ಜಾಗೃತಿ ಪ್ರಾರಂಭವಾಗಬೇಕು. ಒಬ್ಬರಿಂದ ಒಬ್ಬರಿಗೆ ಇದು ಹರಡುತ್ತಾ ಹೋಗುತ್ತದೆ ಎಂದರು. ಸಂಜೀವಿನಿ ಟ್ರಸ್ಟ್‌ನ ಅಕ್ಷತಾ ಜೈನ್, ಸಮಾಜಸೇವಕರಾದ ಡಾ.ಪರಮೇಶ್ವರಪ್ಪ, ಸುರೇಶ್ ಗೌಡ, ವಿರಾಟ್‌ಶಿವು, ಸತೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net