

ಚಾಮರಾಜನಗರ : ಸಾಹಿತ್ಯ, ಸಂಗೀತ, ನಾಡು-ನುಡಿ ಹಾಗೂ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಥೆಯೊಂದು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಕಲಾ ಸೇವೆ ಜತೆಗೆ ಸಮಾಜ ಸೇವೆ ಮಾಡಿಕೊಂಡು ಜನರ ಏಳಿಗೆಗೆ ಶ್ರಮಿಸುತ್ತಿದೆ.
ನಗರದ ರಾಮಸಮುದ್ರ ಬಡಾವಣೆಯ ಗುರುಸಿದ್ದನಾಯಕ ಮತ್ತು ರಾಜಮ್ಮ ದಂಪತಿ ಪುತ್ರ ಜಿ.ಬಂಗಾರು ಅವರು 2008 ರಲ್ಲಿ ಶ್ರೀವರಮಹಾಲಕ್ಷ್ಮೀ ಸಾಂಸ್ಕೃತಿಕ, ಕ್ರೀಡಾ ಸೇವಾ ಸಂಸ್ಥೆ ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು 16 ವರ್ಷಗಳಿಂದಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಜತೆಗೆ ಹಲವಾರು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಕನ್ನಡ ನಾಡು-ನುಡಿ, ಜಲ, ಭಾಷೆ, ಜಿಲ್ಲೆಯ ಜಾನಪದ ಸಂಸ್ಕೃತಿ, ಸಾಹಿತ್ಯ, ಸಂಗೀತವನ್ನು ಹರಡುವ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಮಹಿಳಾ ಸದಸ್ಯರೇ ಇರುವುದು ವಿಶೇಷ. ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಸಂಸ್ಥೆ ಇಂದಿಗೂ ಸಾಗುತ್ತಲೇ ಇದೆ. ಹಲವಾರು ಭರತನಾಟ್ಯ ಕಲಾವಿದರು, ಸುಗಮ ಸಂಗೀತ ಹಾಡುಗಾರರು, ಕರಾಟೆ ಮತ್ತು ಯೋಗ ತರಬೇತಿಯಲ್ಲಿ ಪರಿಣತಿ ಪಡೆದಿರುವ ಮಹಿಳೆಯರನ್ನು ಶ್ರೀ ವರಮಹಾಲಕ್ಷ್ಮೀ ಸಾಂಸ್ಕೃತಿಕ, ಕ್ರೀಡಾ ಸೇವಾ ಸಂಸ್ಥೆ ಹುಟ್ಟುಹಾಕಿದೆ.
ಅದಲ್ಲದೇ ಜಿಲ್ಲಾ ದಸರಾ ಕಾರ್ಯಕ್ರಮಗಳು, ನೆಹರು ಯುವ ಕೇಂದ್ರದ ವತಿಯಿಂದ ಆಯೋಜನೆ ಮಾಡುವ ಕಾರ್ಯಕ್ರಮಗಳು ಹಾಗೂ ಇನ್ನಿತರ ನೂರಾರು ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಸದಸ್ಯರು ಭಾಗವಹಿಸಿ ವಿವಿಧ ಕಲೆಗಳನ್ನು ಪ್ರದರ್ಶನ ಮಾಡಿದ್ದಾರೆ.
ಅಲ್ಲದೆ ನೂರಾರು ಸೇವಾ ಕಾರ್ಯಕ್ರಮಗಳು, ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಈ ಮೂಲಕ ಜನಸೇವೆಯಲ್ಲೂ ಸಂಸ್ಥೆ ಅಪಾರ ಹೆಸರನ್ನು ಮಾಡುತ್ತಿದೆ. ಮಹಿಳೆಯರನ್ನು ಮತ್ತು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜನೆ ಮಾಡುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.
ಬೆನ್ನೆಲುಬಾಗಿ ನಿಂತ ಮಹಿಳೆಯರು
ಶ್ರೀವರಮಹಾಲಕ್ಷ್ಮೀ ಸಾಂಸ್ಕೃತಿಕ, ಕ್ರೀಡಾ ಮತ್ತು ಸೇವಾ ಸಂಸ್ಥೆಗೆ ಮಹಿಳೆಯರು ಬೆನ್ನೆಲುಬಾಗಿ ನಿಂತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಸದಸ್ಯರಾಗಿದ್ದು, ಇದರಲ್ಲಿ ವಿದ್ಯಾರ್ಥಿನಿಯರು, ಶಿಕ್ಷಕಿಯರು, ಉಪನ್ಯಾಸಕರು, ಕಲಾವಿದರು, ಸಮಾಜ ಸೇವಕರು ಹಾಗೂ ಗೃಹಿಣಿಯರು ಇದ್ದಾರೆ. ಸಂಸ್ಥೆಯ ಭರತನಾಟ್ಯ ಕಲಾವಿದರಾದ ರಂಜಿತಾ, ಮೇಘಶ್ರೀ, ಸೌಜನ್ಯಾ, ಸಹನಾ, ಮಾದಲಾಂಬಿಕೆ, ರೇಖಾ, ಪೂಜಾ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಭಕ್ತಿಗೀತೆಯಲ್ಲಿ ಮೇಘಶ್ರೀ, ಕರಾಟೆಯಲ್ಲಿ ಸೌಜನ್ಯಾ, ಯೋಗ ತರಬೇತಿಯಲ್ಲಿ ದಿವ್ಯಾ ಮತ್ತು ಶಿಲ್ಪಾ, ಪರಿಸರ ಸಂರಕ್ಷಣೆಯಲ್ಲಿ ಮಾದಲಾಂಬಿಕೆ, ಸಹನಾ, ನಾಗಲಕ್ಷ್ಮೀ ಹಾಗೂ ಇನ್ನಿತರ ಸದಸ್ಯರು ನಿರಂತರವಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.
ವಿದ್ಯಾರ್ಥಿಗಳು ಮಕ್ಕಳಿಗೆ ಬೆಂಬಲ
ಶ್ರೀ ವರಮಹಾಲಕ್ಷ್ಮೀ ಸಂಸ್ಥೆ ಸಾವಿತ್ರಿ ಬಾಪುಲೆ ಅವರ ಸ್ಫೂರ್ತಿಯಿಂದ ಶಿಕ್ಷಣ ವಂಚಿತರಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ನೋಟ್‌ಬುಕ್, ಬ್ಯಾಗ್, ಬಟ್ಟೆಯನ್ನು ಉಚಿತವಾಗಿ ವಿತರಣೆ ಮಾಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದೆ. ಸರ್ಕಾರಿ ಶಾಲೆ-ಕಾಲೇಜಿನಲ್ಲಿ ಓದಿ ಹೆಚ್ಚು ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಸಮಯಪ್ರಜ್ಞೆ ಮೂಡಿಸಲು ಗಡಿಯಾರ ವಿತರಣೆ, ಚಳಿ-ಮಳೆಗಾಲದಲ್ಲಿ ಅನುಕೂಲವಾಗುವಂತೆ ಛತ್ರಿ, ಹೊದಿಕೆ ವಿತರಣೆ ಮಾಡಿದ್ದಾರೆ. ವಿವಿಧ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳಲ್ಲಿ ಹಲವಾರು ಸ್ಪರ್ಧಾ ಕಾರ್ಯಕ್ರಮಗಳು ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿ ಕಲಾವಿದರನ್ನು ಒರಗೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಹಲವು ಕಾರ್ಯಕ್ರಮ ಆಯೋಜನೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಲವು ರಾಷ್ಟ್ರ ನಾಯಕರ ಜಯಂತಿ ಕಾರ್ಯಕ್ರಮಗಳು, ವಿಶ್ವ ಪರಿಸರ ದಿನಾಚರಣೆ, ಕೋವಿಡ್ ಸಂದರ್ಭದಲ್ಲಿ ಉಚಿತವಾಗಿ ಊಟದ ವ್ಯವಸ್ಥೆ, ಮಾಸ್ಕ್ ವಿತರಣೆ, ಸಂವಿಧಾನ ಜಾಗೃತಿಗಾಗಿ ಸಂವಿಧಾನ ಓದು ಕಾರ್ಯಕ್ರಮ, ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಣೆ, ಆರೋಗ್ಯ ತಪಾಸಣಾ ಶಿಬಿರ, ಆಹಾರ ಮೇಳ, ಗ್ರಾಮೀಣ ಕ್ರೀಡಾಕೂಟ, ಜಾನಪದ ಸಂಭ್ರಮ, ನೃತ್ಯ ರೂಪಕ ಕಾರ್ಯಕ್ರಮ, ವಿವಿಧ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಈ ಸಂಸ್ಥೆಯ ಸೇವೆಯನ್ನು ಗುರುತಿಸಿ 2017ರಲ್ಲಿ ಜಿಲ್ಲಾ ಯುವ ಪ್ರಶಸ್ತಿ, ನೆಹರು ಯುವಕೇಂದ್ರದಿಂದ ಪ್ರಶಸ್ತಿಗಳು ಸಂದಿವೆ. ಅದಲ್ಲದೇ ಹಲವಾರು ಸಾಧಕರನ್ನು ಗುರುತಿಸಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಗಿದೆ.
ಸಮಾಜದಲ್ಲಿರುವ ಕಲಾವಿದರು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಅವಕಾಶಗಳನ್ನು ಕಲ್ಪಿಸುವುದು ಸಂಸ್ಥೆಯ ಧ್ಯೇಯೋದ್ದೇಶವಾಗಿದೆ. ಮುಂದಿನ ದಿನಗಳಲ್ಲೂ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಾಗೂ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು.ಜಿ.ಬಂಗಾರು ಅಧ್ಯಕ್ಷಶ್ರೀವರಮಹಾಲಕ್ಷ್ಮೀ ಸಾಂಸ್ಕೃತಿಕ, ಕ್ರೀಡಾ ಮತ್ತು ಸೇವಾ ಸಂಸ್ಥೆ, ಚಾಮರಾಜನಗರ