ಮಣ್ಣು ಕಳ್ಳರ ಮೇಲೆ ಕಣ್ಣು

02rajesh6
Published on

ಚಾಮರಾಜನಗರ: ಜಿಲ್ಲೆಯಲ್ಲಿ ಚಿನ್ನ ಕದಿಯುವ ಕಳ್ಳರಿಗಿಂತ ಮಣ್ಣು ಕದಿಯುವ ಖದೀಮರ ಸಂಖ್ಯೆ ಹೆಚ್ಚಾಗುತ್ತಿದ್ದು, ಬೇರೆ ತಾಲೂಕುಗಳಿಗೆ ಹೋಲಿಸಿದರೆ ಚಾಮರಾಜನಗರದಲ್ಲಿ ಅಕ್ರಮ ಮಣ್ಣು ದಂಧೆ ವಿರುದ್ಧ ನಿರಂತರ ದಾಳಿಗಳು ನಡೆಯುತ್ತಿವೆ.

ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಹನೂರು, ಕೊಳ್ಳೇಗಾಲ ತಾಲೂಕಿನ ಸರ್ಕಾರಿ ಭೂಮಿಯಲ್ಲಿ ಮಣ್ಣು ಕಬಳಿಕೆ, ಅಕ್ರಮ ಸಾಗಣೆ ಪ್ರಕರಣ ಆಗಾಗ್ಗೆ ಸದ್ದು ಮಾಡುತ್ತಿವೆ. ಇವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸುದ್ದಿಗಳೂ ಕಡಿಮೆಯಾಗುತ್ತಿದೆ. ಆದರೆ ಚಾಮರಾಜನಗರ ತಾಲೂಕಿನಲ್ಲಿ ತಹಸೀಲ್ದಾರ್ ಬಸವರಾಜು ಅಕ್ರಮ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿ ದಂಧೆಕೋರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಚಾಮರಾಜನಗರ ತಹಸೀಲ್ದಾರ್ ಕಚೇರಿ ನೀಡಿರುವ ಮಾಹಿತಿ ಪ್ರಕಾರ, 2024ರ ಜನವರಿಂದ ಈವರೆಗೆ ಕೆಲ್ಲಂಬಳ್ಳಿ, ಜ್ಯೋತಿಗೌಡನಪುರ, ಹರದನಹಳ್ಳಿ, ಶಿವಪುರ ಸೇರಿದಂತೆ ಇತರ ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಜ.11ರ ರಾತ್ರಿ 10.30ರಲ್ಲಿ ಕೆಲ್ಲಂಬಳ್ಳಿ ಗ್ರಾಮದ ಸರ್ವೇ ನಂ.135/1 ಮತ್ತು 134/1ರ ಜಮೀನಿನಲ್ಲಿ ಜೆಸಿಬಿ ಸಹಾಯದಿಂದ ಟಿಪ್ಪರ್‌ಗಳನ್ನು ಬಳಸಿಕೊಂಡು ಕೆಂಪು ಮಣ್ಣನ್ನು ತುಂಬುತ್ತಿರುವ ವೇಳೆ ದಾಳಿ ನಡೆಸಿ ಮೂರು ಟಿಪ್ಪರ್ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆಯಲಾಗಿದೆ.
ೆ.24ರ ರಾತ್ರಿ 11 ಗಂಟೆಯಲ್ಲಿ ಕೆಲ್ಲಂಬಳ್ಳಿಯಲ್ಲಿ ಕೆಐಎಡಿಬಿ ವಶಕ್ಕೆ ಪಡೆದಿರುವ ಜಾಗದಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡಲಾಗುತ್ತಿತ್ತು. ಈ ವಿಷಯ ತಿಳಿದು ದಾಳಿ ನಡೆಸಿ ಒಂದು ಹಿಟಾಚಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಶಿವಪುರ ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಒಂದು ಟಿಪ್ಪರ್, ಮೂಡ್ಲಹೊಸಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಒಂದು ಟಿಪ್ಪರ್ ಅನ್ನು ವಶಕ್ಕೆ ಪಡೆಯಲಾಗಿತ್ತು.

ಜ್ಯೋತಿಗೌಡನಪುರದಲ್ಲಿ ದಂಧೆ: ಚಂದಕವಾಡಿ ಹೋಬಳಿಯ ಜ್ಯೋತಿಗೌಡನಪುರ ಗ್ರಾಮದ ಸರ್ವೇ ನಂ.185ರ ಸರ್ಕಾರಿ ಗೋಮಾಳದಲ್ಲಿ ಅನಧಿಕೃತವಾಗಿ ಮಣ್ಣು ತೆಗೆಯುತ್ತಿದ್ದಾಗ ದಾಳಿ ಮಾಡಲಾಗಿದ್ದು, ಈ ವೇಳೆ 7 ಟ್ರ್ಯಾಕ್ಟರ್ ಮತ್ತು 1 ಜೆಸಿಬಿಯನ್ನು ವಶ ಪಡಿಸಿಕೊಳ್ಳಲಾಗಿತ್ತು. ಚಂದಕವಾಡಿ ಹೋಬಳಿಯ ಹರದನಹಳ್ಳಿ ಎಚ್.ಡಿ.ಾರೆಸ್ಟ್ ಸರ್ವೇ ನಂ.3ರಲ್ಲಿ ಅನಧಿಕೃತ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವೇಳೆ ದಾಳಿ ಮಾಡಿದಾಗ ಕಲ್ಲು ತುಂಬಿದ್ದ ಲಾರಿಯನ್ನೂ ಸೆರೆ ಹಿಡಿಯಲಾಗಿತ್ತು.

ಹಣ ಸಂಪಾದನೆ ಮಾಡುವ ಮಾರ್ಗ
ಮಣ್ಣು ಕದಿಯುತ್ತಿರುವವರಿಗೆ ಸರ್ಕಾರಿ ಜಮೀನುಗಳೇ ಟಾರ್ಗೆಟ್ ಆಗಿದೆ. ಖಾಸಗಿ ಜಮೀನುಗಳಲ್ಲಿ ಮಣ್ಣು ಕದ್ದರೆ ಸಿಕ್ಕಿ ಬೀಳುತ್ತಾರೆ. ಆದರೆ ಸರ್ಕಾರಿ ಜಮೀನುಗಳಲ್ಲಿ ಮಣ್ಣು ಲೂಟಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುವ ದಂಧೆಕೋರರು ಎಗ್ಗಿಲ್ಲದೆ ಮಣ್ಣು ಕದಿಯುತ್ತಿದ್ದಾರೆ. ಕದ್ದ ಮಣ್ಣನ್ನು ಇಟ್ಟಿಗೆ ಕಾರ್ಖಾನೆ ಮತ್ತು ವಿವಿಧ ಕೆಲಸಗಳಿಗೆ ಸಾಗಣೆ ಮಾಡಿ ಹಣ ಸಂಪಾದನೆ ಮಾಡುವ ಮಾರ್ಗವನ್ನು ದಂಧೆಕೋರರು ಕಂಡುಕೊಂಡಿದ್ದಾರೆ.

ರೈತರ ಹೆಸರು ದುರುಪಯೋಗ?
ಹಳ್ಳಿಗಳಲ್ಲಿನ ಕೆರೆಗಳಲ್ಲಿ ರೈತರಿಗೆ ಮಣ್ಣು ತೆಗೆದುಕೊಳ್ಳಲು ಅವಕಾಶವಿದೆ. ಈ ಅವಕಾಶವನ್ನೇ ಮಣ್ಣು ಲೂಟಿಕೋರರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ನಿಜವಾದ ರೈತರು ಹಳ್ಳ ಬಿದ್ದ ಜಮೀನುಗಳಲ್ಲಿ ನಡುಬಗ್ಗಿಸಿ ಕೃಷಿ ಮಾಡುತ್ತಿದ್ದಾರೆ. ಆದರೆ ರೈತರ ಹೆಸರನ್ನು ಹೇಳಿಕೊಂಡು ಮಣ್ಣು ತೆಗೆಯುತ್ತಿರುವವರು ಆ ಮಣ್ಣನ್ನು ತಮ್ಮ ಜಮೀನಿಗೆ ಹಾಕಿಕೊಳ್ಳುತ್ತೇನೆ ಎಂದು ಹೇಳಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಪ್ರಾಮುಖ್ಯತೆ ಕೊಡಬೇಕು. ಪ್ರಾಕೃತಿಕ ಸಂಪತ್ತನ್ನು ಉಳಿಸಬೇಕು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಲು ಬೆಂಬಲವಾಗಿ ನಿಲ್ಲುತ್ತಾರೆ. ಕಾನೂನು ರಕ್ಷಣೆಯಾಗಬೇಕೆಂಬುದೇ ಜನರ ನಿರೀಕ್ಷೆಯೂ ಆಗಿದೆ. ಎಲ್ಲೇ ಪ್ರಾಕೃತಿಕ ಸಂಪತ್ತು ಲೂಟಿಯಾಗುತ್ತಿದೆ ಎಂದು ಗೊತ್ತಾದರೆ ಅಲ್ಲಿಗೆ ದಾಳಿ ಮಾಡಿ ಕಡಿವಾಣ ಹಾಕುತ್ತಿದ್ದೇವೆ. ಇಂತಹ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ, ಯಾರ ಒತ್ತಡಕ್ಕೆ ಮಣಿಯುವುದೂ ಇಲ್ಲ. ಹಾಗಾಗಿ ಅಕ್ರಮ ಎಂದು ಕಂಡುಬರುವುದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.ಬಸವರಾಜು, ತಹಸೀಲ್ದಾರ್,ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net