

ಚಾಮರಾಜನಗರ : ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜು.6 ರಂದು ಸೌಹಾರ್ದ ಸಭೆಯನ್ನು ಆಯೋಜಿಸಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ಪ್ರಾರಂಭವಾಗಲಿದೆ. ಈ ಸಭೆಯಲ್ಲಿ ಆದಿಕರ್ನಾಟಕ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ನಿಲಯದ ಆಸ್ತಿ ಸಂರಕ್ಷಣಾ ಸಮಿತಿಯ ಸದಸ್ಯರನ್ನು ಆಹ್ವಾನಿಸಲಾಗುವುದು. ಸಮಾಜದ ಒಗ್ಗಟ್ಟಿನ ಹಿತದೃಷ್ಟಿಯಿಂದ ವಿದ್ಯಾರ್ಥಿ ನಿಲಯದ ವಿಚಾರವಾಗಿ ಉಂಟಾಗಿರುವ ಭಿನ್ನಾಭಿಪ್ರಾಯ ಶಮನ ಮಾಡಲು ಸಭೆಯನ್ನು ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾಣದ ಕೈಗಳು ಆಸ್ತಿ ವಿವಾದದಲ್ಲಿ ಕೆಲಸ ಮಾಡುತ್ತಿದೆ ಎಂಬ ನನ್ನ ಹೇಳಿಕೆಯಿಂದ ಆಸ್ತಿ ಸಂರಕ್ಷಣಾ ಸಮಿತಿಯ ಮುಖಂಡರಿಗೆ ಧಕ್ಕೆಯಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಎಂದ ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಭೆಗೆ ಬರಲಿ ನಿರಾಕರಿಸಿದ್ದಾರೆ ಎಂದು ಹೇಳಿದರು.
ಮುಖಂಡ ಎಸ್.ಪಿ.ಮಹೇಶ್ ಮಾತನಾಡಿ, ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿವಾದಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರೇ ಕಾರಣರಾಗಿದ್ದಾರೆ. ಸುಮಾರು 17 ವರ್ಷಗಳ ಕಾಲ ರಾಜಕೀಯ ವನವಾಸ ಅನುಭವಿಸಿದ್ದರೂ ಅವರಿಗೆ ಸಮುದಾಯದ ವಿಚಾರಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದು ತಿಳಿದಿಲ್ಲ ಎಂದು ಆರೋಪಿಸಿದರು. ಗಡಿ ಯಜಮಾನ ಮಾಧು, ನಗರಸಭಾ ಮಾಜಿ ಸದಸ್ಯ ಎಸ್.ಮಹದೇವಯ್ಯ, ಪುಟ್ಟಸ್ವಾಮಿ, ಅಂಬೇಡ್ಕರ್ ಸೇನೆ ಅಧ್ಯಕ್ಷ ಗಣೇಶ್ ಪ್ರಸಾದ್ ಹಾಜರಿದ್ದರು.