

ಚಾಮರಾಜನಗರ: ಸಮೃದ್ಧವಾದ ಕಾಡಿನಲ್ಲಿ ಆಹಾರ ಮತ್ತು ಕುಡಿಯಲು ನೀರು ಸಿಗದ ಪರಿಣಾಮವಾಗಿ ಕಾಡಾನೆಗಳು ನಾಡಿಗೆ ಲಗ್ಗೆ ಇಡುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ರೈತರ ಬೆಳೆದ ಬೆಳೆಗಳಿಗೆ ಹಾನಿಯುಂಟಾಗುತ್ತಿದ್ದು, ಹಲವು ಸಮಸ್ಯೆಗಳು ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿಗಿರಿರಂಗಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಒಳಗೊಂಡಂತೆ ಮಲೈ ಮಹದೇಶ್ವರ ಹಾಗೂ ಕಾವೇರಿ ಅಭಯಾರಣ್ಯ ವ್ಯಾಪಿಸಿಕೊಂಡಿದೆ. ಚಾಮರಾಜನಗರ, ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕಿನಲ್ಲಿ ಇರುವ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ನಿತ್ಯವೂ ವರದಿಯಾಗುತ್ತಲೇ ಇದೆ. ಕಾಡಿನಿಂದ ನಾಡಿಗೆ ದಾಂಗಿಡಿಯಿಡುವ ಆನೆಗಳು ರೈತರು ಬೆಳೆದ ತೆಂಗು, ಅಡಕೆ, ಬಾಳೆ, ಜೋಳ, ಹಲಸು ಹಾಗೂ ಇನ್ನಿತರೆ ಬೆಳೆಗಳನ್ನು ಹಾನಿಮಾಡುವುದಲ್ಲದೇ ನಿರಂತರವಾಗಿ ಕಾಡಂಚಿನ ಗ್ರಾಮದ ಜನರಿಗೆ ಇನ್ನಿತರೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
ಹಲವೆಡೆ ಆನೆ ಮತ್ತು ಮಾನವ ಸಂಘರ್ಷಗಳಿಂದ ರೈತರು ಹಾಗೂ ಸಾಮಾನ್‌ಉ ಜನರು ಮೃತ ಪಟ್ಟಿರುವ ಉದಾಹರಣೆಗಳು ಇದೆ. ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆಯವರು ರೈಲು ಕಂಬಿಗಳನ್ನು ಅಳವಡಿಸುವುದು, ಸೋಲಾರ್ ಬೇಲಿ ಹಾಕುವುದು, ಅರಣ್ಯದ ಹಂಚಿನಲ್ಲಿ ಬೃಹತ್ ಟ್ರಂಚ್‌ಗಳನ್ನು ಹೊಡೆಸುವ ಪ್ರಯತ್ನಗಳನ್ನು ಮಾಡುತ್ತಿದೆ. ಈ ಎಲ್ಲಾ ತಡೆಗಳನ್ನು ಲೆಕ್ಕಿಸದ ಆನೆಗಳು ಉಪಾಯವಾಗಿ ಕಾಡಿನಿಂದ ನಾಡಿಗೆ ನುಗ್ಗುವುದನ್ನು ಮುಂದುವರಿಸುತ್ತಿದೆ. ಇದರಿಂದಾಗಿ ಬೆಳೆಹಾನಿಯಲ್ಲದೇ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಳಿಗೂ ಹಾನಿಯಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆ ಹಾವಳಿ ತಡೆಗೆ ಶಾಶ್ವತ ಪರಹಾರವನ್ನು ಕಂಡುಹಿಡಿಯಬೇಕಿದೆ.