ಸ್ವಾಮೀಜಿಗಳು ಕಾವಿ ಕಳಚಿಟ್ಟು ರಾಜಕಾರಣ ಮಾಡಲಿ

Pu.Shrinivas Nayaka
Published on

ಚಾಮರಾಜನಗರ: ಮಠಾಧೀಶರು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು, ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಅದಾಗ್ಯೂ ರಾಜಕಾರಣ ಮಾಡುವುದಿದ್ದರೇ ಕಾವಿ ಕಳಚಿಟ್ಟು ರಾಜಕಾರಣ ಮಾಡಲಿ ಎಂದು ಕಾಯಕ ಸಮಾಜದ ಮುಖಂಡ ಪು.ಶ್ರೀನಿವಾಸನಾಯಕ ಹೇಳಿದರು.

ಗುರುಪೀಠ ಇರುವುದು ದೇಶದಲ್ಲಿ ಶಾಂತಿ, ಸಮಾನತೆ ತರಲು. ಪ್ರತಿಯೊಬ್ಬರನ್ನು ಸಾಮಾಜಿಕ ನ್ಯಾಯದಿಂದ ನೋಡಲು. ಒಂದು ವೇಳೆ ಸ್ವಾಮೀಜಿಗಳು ರಾಜಕಾರಣ ಮಾಡುವುದೇ ಆದರೆ ಪೀಠ ತ್ಯಾಗ ಮಾಡಿ, ಕಾವಿ ಕಳಚಿ ಮಾಡಲಿ. ಕಾವಿತೊಟ್ಟವರನ್ನು ನಾವು ದೇವರೆಂದು ನಂಬುತ್ತೇವೆ. ಮಠಾಧೀಶರುಗಳು ಸಮಾಜವನ್ನು ತಿದ್ದುವ ಮೂಲಕ ಸದೃಢವಾಗಿ ಕೆಲಸಮಾಡಬೇಕು ಹೊರತು ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಯಕ ಸಮಾಜದವರು ಇಲ್ಲಿಯವರಗೆ ಮೇಲ್ವರ್ಗಗಳ ಕಾಯಕ ಮಾಡಿಕೊಂಡು ಬಂದಿದ್ದೇವೆ. ನಮ್ಮ ಪೂರ್ವಜರ ದುಡಿಮೆ ಫಲವಾಗಿ ನೀವು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಬಲಾಢ್ಯರಾಗಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸರ್ವರಿಗೂ ಸಮಬಾಳು, ಸಮಪಾಲು ದೊರಕಿಸಿಕೊಟ್ಟರು. ಪ್ರತ್ಯೇಕ ಮತದಾನಹಕ್ಕು ಕೇಳಿದರು. 70 ವರ್ಷಗಳಿಂದಲೂ ಸೇವೆ ಮಾಡಿಕೊಂಡ ಬಂದರು ಕೂಡ ನಮ್ಮ ಮೇಲೆ ಶೋಷಣೆ ನಿಂತಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಬಲಿಷ್ಠ ಸಮಾಜದ ಪ್ರಧಾನಿಮಂತ್ರಿಗಳು, ಮುಖ್ಯಮಂತ್ರಿಗಳು ಆಗಿದ್ದಾರೆ. ಅದನ್ನು ಸಹಿಸಿಕೊಂಡು ಬಂದಿದ್ದೇವೆ. ಕಾಯಕ ಸಮಾಜದವರು ರಾಜ್ಯದಲ್ಲಿ ಎಷ್ಟು ಜನರು ಮುಖ್ಯಮಂತ್ರಿ ಆಗಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕಾಯಕ ಸಮಾಜದ ಪ್ರತಿನಿಧಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಥಾನ ತೆರವುಮಾಡಿ ಎಂದು ಕೇಳುವುದು ಖಂಡನೀಯವಾಗಿದೆ ಎಂದರು.

ಕಾಯಕ ಸಮಾಜದ ಮುಖ್ಯಮಂತ್ರಿಯ ಸ್ಥಾನ ತೆರವು ಮಾಡುವ ಷಡ್ಯಂತ್ರ ರೂಪಿಸಿದರೇ, ಡಾ.ಬಿ.ಆರ್.ಅಂಬೇಡ್ಕರ್ ಅವರು ಅಂದು ಕೇಳಿದ್ದ ಪ್ರತ್ಯೇಕ ಮತದಾನವನ್ನು ನಾವು ಕೇಳಲು ಮುಂದಾಗುತ್ತೇವೆ. ಮುಂದುವರಿದು ಪ್ರತ್ಯೇಕ ರಾಜ್ಯ, ದೇಶವನ್ನು ಕೇಳಬೇಕಾಗುತ್ತದೆ. ದೇಶ, ರಾಜ್ಯ ಒಡೆಯಲಿಕ್ಕೆ ನೀವು ಕಾರಣವಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಮುಖಂಡ ಪಿ.ಸಂಘಸೇನಾ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಲಿಂಗರಾಜು, ಮಸಗಾಪುರ ಬಿ.ಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net