ನಾಯಕತ್ವ ಗುಣ ವೃದ್ಧಿಗೆ ರೋಟರಿ ಸಿಲ್ಕ್‌ಸಿಟಿ ಸಹಕಾರಿ

26rajesh1
Published on

ಚಾಮರಾಜನಗರ: ಯುವ ಜನಾಂಗದಲ್ಲಿ ಸಮಯ ಪರಿಪಾಲನೆ, ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ವಿಕಸನ, ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಲು ರೋಟರಿ ಸಿಲ್ಕ್ ಸಿಟಿ ಉತ್ತಮ ವೇದಿಕೆಯಾಗಿದೆ ಎಂದು ರೋಟರಿ ನಿಯೋಜಿತ ಜಿಲ್ಲಾ ಪ್ರಾಂತಪಾಲ ಸತೀಶ್ ಬೋಲಾರ್ ತಿಳಿಸಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ರೋಟರಿ ಸಿಲ್ಕ್‌ಸಿಟಿಯ 2024-25ನೇ ಸಾಲಿನ ನೂತನ ಅಧ್ಯಕ್ಷ ಮಾಣಿಕ್‌ಚಂದ್ ಸೀರ್ವಿ ಹಾಗೂ ತಂಡದವರ ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಚಾಮರಾಜನಗರ ರೋಟರಿ ಹಾಗೂ ರೋಟರಿ ಸಿಲ್ಕ್ ಸಿಟಿ ಬಹಳ ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿದೆ. ಜಿಲ್ಲೆಯ ರೋಟರಿಯ ಬಗ್ಗೆ ಇನ್ನು ಹೆಚ್ಚಿನ ಅಭಿಮಾನ ಮೂಡುತ್ತಿದೆ. ರೋಟರಿ ಸಿಲ್ಕ್‌ಸಿಟಿಯ 34 ಸದಸ್ಯರು ಸಹ ಬಿಳಿ ಬಣ್ಣದ ಶರ್ಟ್ ಧರಿಸಿ, ಬಹಳ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹಾಗೂ ಜವಾಬ್ದಾರಿಗಳ ಹಂಚಿಕೆ, ಶಿಸ್ತುಬದ್ಧವಾಗಿ ನಡೆಯುತ್ತಿರುವ ಕಾರ್ಯಕ್ರಮವನ್ನು ನೋಡುವುದು ಒಂದು ಚೆಂದವಾಗಿದೆ. ಇಂಥ ಸಂಸ್ಥೆಯ ಸದಸ್ಯತ್ವವನ್ನು ಪಡೆದುಕೊಳ್ಳುವ ಜತೆಗೆ ಯುವಕರು ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಸೇವಾ ಮನೋಭಾವ ರೂಡಿಸಿಕೊಳ್ಳಬೇಕು ಎಂದರು.

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಪಿ.ಮಾಣಿಕ್‌ಚಂದ್ ಸೀರ್ವಿ ಮಾತನಾಡಿ, ಹಿರಿಯರ ಮಾರ್ಗದರ್ಶನ ಹಾಗೂ ರೋಟರಿ ಸಿಲ್ಕ್‌ಸಿಟಿ ಮಿತ್ರರ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಉದ್ದೇಶ ನನ್ನದಾಗಿದೆ. ರಕ್ತದಾನ ಶಿಬಿರ ಆಯೋಜನೆ, ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದು, ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಅವಶ್ಯಕವಾದ ಸಾಮಗ್ರಿಗಳನ್ನು ಕೊಡುಗೆ ನೀಡಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳನ್ನು ಹಾಗೂ ಸಂಸ್ಥೆಯ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಕರಿ ವರದರಾಜಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪುರುಷೋತ್ತಮ್ ಅವರ ಸೇವೆಯನ್ನು ಗುರುತಿಸಿ ಗೌರವ ಸನ್ಮಾನ ಮಾಡಲಾಯಿತು.

ಈ ವೇಳೆ ಸಹಾಯಕ ಪ್ರಾಂತಪಾಲ ಗಿರೀಶ್ ಜೆಡೆ, ವಲಯ ಪ್ರತಿನಿಧಿ ಎಸ್.ಸುರೇಶ್, ನೂತನ ಕಾರ್ಯದರ್ಶಿ ಶಮಿತ್ ಕುಮಾರ್ ಎಚ್.ಪಿ. ನಿಕಟಪೂರ್ವ ಅಧ್ಯಕ್ಷ ಅಕ್ಷಯ್, ನೂತನ ಪದಾಧಿಕಾರಿಗಳಾದ ಸಂತೋಷ್‌ಕುಮಾರ್, ಮಣಿಕಂಠಸ್ವಾಮಿ, ಹರ್ಷದೇವ್, ವಿಶ್ವಾಸ್, ಗಿರೀಶ್ ದೊಡ್ಡರಾಯಪೇಟೆ, ಚೇತನ್ಯ ಪಿ.ಹೆಗಡೆ, ರವಿ, ಪ್ರಶಾಂತ್, ಅದರ್ಶ, ವೆಂಕಟನಾಗಪ್ಪಶೆಟ್ಟಿ, ಶಾಂತಿಪ್ರಸಾದ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net