ಕಾರ್ಖಾನೆಯಿಂದ ಕೊಳಚೆ ನೀರು ಬಿಡುಗಡೆ

25rajesh2
Published on

ಚಾಮರಾಜನಗರ: ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕಾರ್ಖಾನೆಗಳಿಂದ ಕೊಳಚೆ, ರಾಸಾಯನಿಕ ನೀರು ಹೊರಬರುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ತಹಸೀಲ್ದಾರ್ ಬಸವರಾಜು ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ರೈತರ ಕುಂದುಕೊರತೆ ಸಭೆಯಲ್ಲಿ ರೈತ ಮುಖಂಡ ಮರಿಯಾಲ ಮಹೇಶ್ ಮಾತನಾಡಿ, ಕೆಲ್ಲಂಬಳ್ಳಿ ಕೆರೆಗೆ ಕಾರ್ಖಾನೆಯ ರಾಸಾಯನಿಕ ನೀರು ಸೇರುತ್ತಿದೆ. ಕೊಳಚೆ ನೀರು ಚರಂಡಿಯಿಂದ ನೇರವಾಗಿ ಕೆರೆಗೆ ಹರಿದುಬರುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಅಧಿಕಾರಿ ಉಮಾಶಂಕರ್, ಯಾವುದೇ ಕಾರ್ಖಾನೆಯ ನೀರನ್ನು ಹೊರಗೆ ಬಿಡುವಂತಿಲ್ಲ. ಬದಲಾಗಿ ಅಲ್ಲೇ ಮರು ಬಳಕೆ ಅಥವಾ ಗಾರ್ಡನ್‌ಗೆ ಬಳಕೆ ಮಾಡಿಕೊಳ್ಳಬೇಕು. ಕಳೆದ ವಾರ ನನಗೆ ಬಂದ ದೂರಿನ ಪ್ರಕಾರ ಕಾರ್ಖಾನೆಯಿಂದ ಕೊಳಚೆ ನೀರು ಹೊರಬರುತ್ತಿದೆ ಎಂದು ತಿಳಿಯಿತು. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನೋಟಿಸ್ ನೀಡಿದ್ದೇನೆ. ಕೆರೆಯಲ್ಲಿ ಮಿಶ್ರಣವಾಗುತ್ತಿರುವ ನೀರನ್ನು ಪರೀಕ್ಷೆಗೆ ಕಳುಹಿಸಿದ್ದು, ಕಾರ್ಖಾನೆಯವರು ಸಿಸಿಟಿವಿ ಹಾಕಿ ಚರಂಡಿಯಲ್ಲಿ ನೀರು ಹರಿಯುವ ದೃಶ್ಯವನ್ನು ಚಿತ್ರೀಕರಿಸಬೇಕೆಂದು ಸೂಚನೆ ನೀಡಿದ್ದೇನೆ. ಕಾರ್ಖಾನೆ ನೀರು ಹೊರಗೆ ಹರಿಯುತ್ತಿರುವುದು ರೈತರಿಗೆ ಕಂಡರೆ ನನಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಲಂಚದ ಆರೋಪ: ರೈತರ ಜಮೀನನ್ನು ಖರೀದಿ ಮಾಡಲು ಕೆಆರ್‌ಐಡಿಎಲ್ 1 ಕೋಟಿ ರೂ.ಗೆ 3 ಲಕ್ಷ ರೂ. ಲಂಚ ಪಡೆದಿದೆ ಎಂದು ರೈತ ಅಶೋಕ್ ಗಂಭೀರ ಆರೋಪ ಮಾಡಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಬಸವರಾಜು, ಲಂಚದ ಆರೋಪ ಮಾಡುವ ಬದಲು ಸೂಕ್ತ ಸಾಕ್ಷ್ಯಧಾರಗಳನ್ನು ಲೋಕಾಯುಕ್ತ ಇಲಾಖೆಗೆ ಕೊಟ್ಟು ದೂರು ದಾಖಲಿಸಿ ಎಂದು ಸಲಹೆ ನೀಡಿದರು.

ರೈತ ಮುಖಂಡ ಅಶೋಕ್ ಮಾತನಾಡಿ, ಬದನಗುಪ್ಪೆಯ ಸರ್ವೇ ನಂ.224 ದುರಸ್ತಿ ಮಾಡಿಕೊಡಲು ಎಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದರಲ್ಲದೆ, ಸ್ಮಶಾನ ಜಾಗವನ್ನು ಬೇರೆಯವರು ಖಾತೆ ಮಾಡಿಕೊಂಡಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಬಸವರಾಜು, 2 ತಿಂಗಳಲ್ಲಿ ದುರಸ್ತಿ ಮಾಡಿಕೊಡಲಾಗುವುದು, ಸ್ಮಶಾನ ಜಾಗ ಖಾತೆ ಮಾಡಿಕೊಂಡಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತ ಮುಖಂಡ ಎಚ್.ಮೂಕಳ್ಳಿ ಮಹದೇವಸ್ವಾಮಿ ಮಾತನಾಡಿ, ಕೂಡ್ಲೂರು ಗ್ರಾಮ ಪಂಚಾಯಿತಿಯಲ್ಲಿ ಇ ಸ್ವತ್ತು ಮಾಡಿಕೊಡುತ್ತಿಲ್ಲ. ರೈತರ ಕಬ್ಬಿನ ಬಾಕಿ ಹಣ ಬಂದಿಲ್ಲ. ಕಬ್ಬಿನ ಕಾರ್ಖಾನೆಗಳು ರೈತರಿಗೆ ತೂಕದಲ್ಲಿ ಮೋಸ ಮಾಡುತ್ತಿವೆ. ಕಟಾವು ಮತ್ತು ಸಾಗಣೆ ವೆಚ್ಚವನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶಕ ಉಮೇಶ್, ಇ ಸ್ವತ್ತು ಮಾಡಿಕೊಡದಿರಲು ಉಂಟಾಗಿರುವ ತಾಂತ್ರಿಕ ಕಾರಣವನ್ನು ಹೇಳಿದರು. ತಹಸೀಲ್ದಾರ್ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿಕೊಡುವುದಾಗಿ ತಿಳಿಸಿದರು.

ಕಬ್ಬಿನ ತೂಕದಲ್ಲಿ ಮೋಸವಾಗುತ್ತಿರುವ ಸಂಬಂಧ ಎಪಿಎಂಸಿ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಎಲ್ಲ ಎಪಿಎಂಸಿಗಳಲ್ಲಿರುವ ವೇ ಬ್ರಿಡ್ಜ್‌ಗಳಲ್ಲಿ ಕಬ್ಬಿನ ತೂಕವನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಕಾರ್ಖಾನೆ ಹತ್ತಿರದ 10 ಕಿ.ಮೀ ಒಳಗೆ ವೇ ಬ್ರಿಡ್ಜ್ ಮಾಡಲು ಸರ್ಕಾರ ಜಾಗ ನೋಡುತ್ತಿದೆ. ಕುಂತೂರಿನಲ್ಲಿ ಇದಕ್ಕೆ ಸಿದ್ಧತೆಯೂ ನಡೆದಿದೆ ಎಂದು ವಿವರಿಸಿದರು.
ರೈತರಾದ ಕಲ್ಪುರ ಪಾಪು, ಮಲ್ಲೇಶ್, ಯಶವಂತ್ ಮತ್ತು ಇತರರು ಇದ್ದರು.

ರೈತರು ಕಡಿಮೆ, ಅಧಿಕಾರಿಗಳೇ ಹೆಚ್ಚು
ತಾಲೂಕು ಮಟ್ಟದ ರೈತರ ಕುಂದುಕೊರತೆ ಸಭೆಯಲ್ಲಿ ರೈತರು ಕಡಿಮೆ ಸಂಖ್ಯೆಯಲ್ಲಿದ್ದರೆ, ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಭೆ ಆಯೋಜನೆ ಮಾಡಿರುವುದನ್ನು ಎರಡ್ಮೂರು ದಿನಗಳ ಹಿಂದೆಯೇ ತಿಳಿಸಬೇಕಾಗಿತ್ತು. ಪತ್ರಿಕೆಗಳಲ್ಲಿ ಸುದ್ದಿ ಪ್ರಕಟ ಮಾಡಿಸಬೇಕಿತ್ತು. ಸಭೆಯಲ್ಲಿ ಅಧಿಕಾರಿಗಳೇ ಇದ್ದಾರೆ. ರೈತರೇ ಇಲ್ಲ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಚಿಕ್ಕಸ್ವಾಮಿ ಹೇಳಿದರು. ಇದಕ್ಕೆ ತಹಸೀಲ್ದಾರ್ ಬಸವರಾಜು ಪ್ರತಿಕ್ರಿಯಿಸಿ, ಮುಂದಿನ ಬಾರಿ ಸಭೆ ಕರೆದಾಗ ಎಲ್ಲ ಹಳ್ಳಿಗಳಿಗೂ ಮಾಹಿತಿ ನೀಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net