ನಿಗದಿತವಿಲ್ಲದ ಪಡಿತರ ಭಾಗ್ಯ

12raju2
Published on

ಚಾಮರಾಜನಗರ: ‘ಅನ್ನಭಾಗ್ಯ’ ಜಾರಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕಾಳಗ ನಡೆಸಿ ಕೊನೆಗೆ ರಾಜ್ಯ ಸರ್ಕಾರ ಅಕ್ಕಿ ಬದಲು ನಗದನ್ನೇ ನೀಡುವ ಮಾರ್ಗೋಪಾಯ ಕಂಡುಕೊಂಡಿದೆ. ಆದರೆ ಜಿಲ್ಲೆಯಲ್ಲಿ ತೀರಾ ಸುಲಭವಾಗಿ ಪರಿಹರಿಸಿಕೊಳ್ಳಬೇಕಾದ ಪಡಿತರ ವಿತರಣೆ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಕೊಂಡುಕೊಳ್ಳಲಾಗುತ್ತಿಲ್ಲ.

ಶ್ರೀ ಮಲೆ ಮಹದೇಶ್ವರರು ಪವಾಡ ಮಾಡಿದ ಸ್ಥಳಗಳಲ್ಲಿ ಒಂದಾಗಿರುವ, ಸರ್ಕಾರದ ಯೋಜನೆಗಳು ತಲುಪದ ಕಟ್ಟಕಡೆಯ ಕುಗ್ರಾಮವೆಂದೇ ಹೇಳಬಹುದಾದ ನಾಗಮಲೆಯಲ್ಲಿ ಪಡಿತರಕ್ಕೋಸ್ಕರ ಪರದಾಡಬೇಕಾಗಿದೆ. ಗ್ರಾಮದಲ್ಲಿ ಒಟ್ಟು 43 ಪಡಿತರ ಲಾನುಭವಿ ಕುಟುಂಬಗಳಿವೆ. ಮಳೆಯಾಶ್ರಿತ ಗುಡ್ಡಗಾಡಿನಲ್ಲಿ ಕೃಷಿ, ಕೂಲಿಯನ್ನೇ ನಂಬಿ ಬದುಕುತ್ತಿರುವ ಜನರು ಹಸಿವಿನಿಂದ ಮುಕ್ತಗೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಇವರಿಗೆ ೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಟ್ಟಿಗೆ ಮೇನಲ್ಲಿ ಒಂದೇ ಸಲ ಕೊಡಲಾಗಿದೆ. ಜೂನ್ ತಿಂಗಳಲ್ಲಿ ತಲುಪಬೇಕಾಗಿದ್ದ ಪಡಿತರವನ್ನು ಇನ್ನೂ ಕೊಟ್ಟಿಲ್ಲ. ಪ್ರತಿ ತಿಂಗಳೂ ನಿಗದಿತ ದಿನದಂದು ಜನತೆಗೆ ಸೌಲಭ್ಯ ತಲುಪುತ್ತಿಲ್ಲ.

ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪುಣ್ಯಕ್ಷೇತ್ರ ನಾಗಮಲೆಗೆ ಬರುವ ಭಕ್ತರಿಗೆ ಈ ಗ್ರಾಮದ ರಸ್ತೆ ಹೇಗಿದೆ ಎನ್ನುವ ಅರಿವಿದೆ. ಬೆಟ್ಟಗುಡ್ಡ, ಕಲ್ಲು, ಬಂಡೆಗಳ ಹಾದಿಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯ ಜೀಪ್‌ಗಳು, ನಾಗಮಲೆಗೆ ಭಕ್ತರನ್ನು ಕರೆದುಕೊಂಡು ಹೋಗುವ ಖಾಸಗಿ ಜೀಪ್‌ಗಳು ಮಾತ್ರ ಸಂಚರಿಸಿ ಸಾಹಸ ಮೆರೆಯುತ್ತವೆ. ಹೀಗೆ ರಸ್ತೆ ಮಾರ್ಗ ಸರಿ ಇಲ್ಲದ ಕಾರಣಕ್ಕೆ ನಾಗಮಲೆಯಿಂದ 8ರಿಂದ 10 ಕಿ.ಮೀ. ದೂರದಲ್ಲಿರುವ ಗೋಪಿನಾಥಂನ ಪುದೂರಿನಲ್ಲಿ ಪಡಿತರ ಮೂಟೆಗಳನ್ನು ಇಳಿಸಲಾಗುತ್ತಿದೆ.

ಇಲ್ಲಿಂದ ನಾಗಮಲೆಗೆ ಪಡಿತರವನ್ನು ಸಾಗಿಸುವ ಜವಾಬ್ದಾರಿಯನ್ನು ಗೋಪಿನಾಥಂನ ನ್ಯಾಯಬೆಲೆ ಅಂಗಡಿ ಮಾಲೀಕ ಮಣಿ ವಹಿಸಿಕೊಂಡಿದ್ದಾರೆ. ಇವರು ತಿಂಗಳಿಗೆ ಒಮ್ಮೆ ಖಾಸಗಿ ಜೀಪ್‌ಗೆ 2,500 ರೂ. ಬಾಡಿಗೆ ನೀಡಿ ಪಡಿತರವನ್ನು ನಾಗಮಲೆಗೆ ಸಾಗಿಸುತ್ತಿದ್ದರು. ಜೀಪ್‌ನವರು ಈಗ ಅಧಿಕ ಹಣ ಕೇಳುತ್ತಿದ್ದು, ಜತೆಗೆ ಕಳೆದ ಎರಡು ವರ್ಷಗಳಿಂದ ಪಡಿತರ ಸಾಗಣೆಗಾಗಿ ಜೀಪ್‌ಗೆ ಬಾಡಿಗೆ ಹಣವನ್ನು ತಾವೇ ಕೊಡುತ್ತಿದ್ದ ಅವರು ನಷ್ಟವಾಗುತ್ತಿದೆ ಎಂಬ ಬೇಸರದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಕಾಲಕ್ಕೆ ಪಡಿತರವನ್ನು ತಲುಪಿಸುತ್ತಿಲ್ಲ. ಈ ಹಿಂದೆ ಹಳೆಯೂರಿನ ನ್ಯಾಯಬೆಲೆ ಅಂಗಡಿಯವರೂ ಇದೇ ಕಾರಣ ನೀಡಿ ಈ ಗ್ರಾಮಕ್ಕೆ ಪಡಿತರ ವಿತರಣೆ ಮಾಡುವುದನ್ನೇ ನಿಲ್ಲಿಸಿದರು.

ಹೀಗಾಗಿ ನಾಗಮಲೆ ಗ್ರಾಮಸ್ಥರು ಅನ್ನಭಾಗ್ಯ ಯೋಜನೆ ಸೌಲಭ್ಯ ಪಡೆಯಲು ಕಾಯಬೇಕಾಗಿದೆ. ಪುದೂರುವರೆಗೆ 8ರಿಂದ 10 ಕಿ.ಮೀ. ನಡೆದುಕೊಂಡು ಬರಬೇಕು. ಬೆಟ್ಟಗುಡ್ಡ ಹತ್ತಿ ಇಳಿಯಬೇಕಿದೆ. ಮೊದಲೆಲ್ಲ ಕತ್ತೆಗಳ ಮೇಲೆ ಆಹಾರ ಪದಾರ್ಥಗಳನ್ನು ಇಟ್ಟು ಸಾಗಿಸಲಾಗುತ್ತಿತ್ತು. ದಿನ ಕಳೆದಂತೆ ಕತ್ತೆಗಳ ಬಳಕೆಯೂ ಕಡಿಮೆಯಾಗಿಹೋಗಿದೆ. ಆದ್ದರಿಂದ ಗ್ರಾಮಸ್ಥರೇ ಹೆಗಲ ಮೇಲೆ ಪಡಿತರವನ್ನು ಹೊತ್ತುಕೊಂಡು ಸಾಗಬೇಕಿದೆ. ಈ ಮಧ್ಯೆ ಕಾಡುಪ್ರಾಣಿಗಳ ಭಯವೂ ಇದೆ.

ಇಷ್ಟು ಕಷ್ಟದಲ್ಲಿ ಪಡಿತರವನ್ನು ಪಡೆಯಲು ಸಾಧ್ಯವಾಗದೆ ಜನರು ನ್ಯಾಯಬೆಲೆ ಅಂಗಡಿಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಜಮೀನಿನಲ್ಲಿ ಬೆಳೆದ ದವಸ-ಧಾನ್ಯ ಬಳಸಿಕೊಂಡು ಆಹಾರ ತಯಾರಿಸಿಕೊಳ್ಳುತ್ತಿದ್ದಾರೆ. ಜಮೀನು ಇಲ್ಲದ ಬಡವರು ಪಡಿತರಕ್ಕಾಗಿ ಪರದಾಡುತ್ತಿದ್ದು, ವಯಸ್ಸಾದವರು ನ್ಯಾಯಬೆಲೆ ಅಂಗಡಿಗೆ ಹೋದರೂ ಪಡಿತರವನ್ನು ಹೊತ್ತುಕೊಂಡು ವಾಸಪ್ ಊರಿಗೆ ಬರೋಕೂ ಶಕ್ತಿ ಇಲ್ಲವಾಗಿದೆ.

‘ನಗದು’ ರವಾನೆಗೆ ಖಾತೆ ಕ್ಯಾತೆ:
ನಾಗಮಲೆ ಗ್ರಾಮಸ್ಥರು ಕಾಂಗ್ರೆಸ್‌ನ 3ನೇ ಗ್ಯಾರಂಟಿಯಾಗಿರುವ ಅನ್ನಭಾಗ್ಯ ಯೋಜನೆಯಡಿ ನಗದು ಪಡೆಯಲು ಕಷ್ಟ ಪಡಬೇಕಾಗಿದೆ. ಏಕೆಂದರೆ, ಲಾನುಭವಿಗಳಲ್ಲಿ ಹಲವರು ಬ್ಯಾಂಕ್ ಖಾತೆ ಹೊಂದಿಲ್ಲ. ಖಾತೆ ಹೊಂದಿದ್ದರೂ ಆಧಾರ್ ಜೋಡಣೆ ಮಾಡಿಸಿಲ್ಲ. ಇದೆಲ್ಲವನ್ನೂ ಸರಿಪಡಿಸಿಕೊಳ್ಳಬೇಕೆಂಬ ಅರಿವೂ ಗ್ರಾಮಸ್ಥರಿಗೆ ಇಲ್ಲ. ಈ ಬಗ್ಗೆ ಹನೂರು ಆಹಾರ ನಿರೀಕ್ಷಕ ಬಸವರಾಜು ‘ವಿಜಯವಾಣಿ’ಯೊಂದಿಗೆ ಮಾತನಾಡಿ, ನ್ಯಾಯಬೆಲೆ ಅಂಗಡಿಗೆ ಪತ್ರ ಬರೆದು ಬ್ಯಾಂಕ್ ಖಾತೆ ಹೊಂದಿಲ್ಲದ, ಆಧಾರ್ ಜೋಡಣೆ ಮಾಡದ ಲಾನುಭವಿಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಗ್ರಾಮಸ್ಥರ ಒಳಹೊರಗು:
ನಾಗಮಲೆಯಲ್ಲಿ ಶಿವಲಿಂಗ, ಇದಕ್ಕೆ ನೆರಳಾಗಿರುವ ಹಾವಿನ ಹೆಡೆಯು ಬೃಹತ್ ಬಂಡೆ ಸ್ವಾಭಾವಿಕವಾಗಿ ಒಡಮೂಡಿದೆ. ಇದನ್ನು ನೋಡಲು, ಪೂಜೆ ಸಲ್ಲಿಸಲು ಅಪಾರ ಭಕ್ತರು ಬೆಟ್ಟಗುಡ್ಡದ ದಾರಿಯಲ್ಲಿ ನಡೆದುಕೊಂಡು ಬರುತ್ತಾರೆ. ಈ ಸಂದರ್ಭದಲ್ಲಿ ನಾಗಮಲೆ ಗ್ರಾಮಸ್ಥರ ಮನೆ, ಗುಡ್ಡಗಾಡಿನ ಜಮೀನು ಭಕ್ತರ ಕಣ್ಣಿಗೆ ಕಾಣುತ್ತದೆ. ಒಳಗೊಳಗೆ ಪಡಿತರಕ್ಕಾಗಿ ಪರದಾಡುತ್ತಿರುವ ಗ್ರಾಮಸ್ಥರ ಹೊರ ಜೀವನ ಅಚ್ಚರಿಯಂತೆ ಭಾಸವಾಗುತ್ತದೆ

ನಾಗಮಲೆಗೆ ಪಡಿತರ ಸಾಗಣೆ, ವಿತರಣೆ ವಿಚಾರ ಗಮನಕ್ಕೆ ಬಂದಿದೆ. ಏನೇ ಸಮಸ್ಯೆಗಳಿದ್ದರೂ ಬಗೆಹರಿಸಲು ಕ್ರಮ ವಹಿಸಲಾಗುವುದು.-ಯೋಗಾನಂದ್ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚಾಮರಾಜನಗರ ನಾಗಮಲೆಗೆ ಕಳೆದ ತಿಂಗಳ ಪಡಿತರವನ್ನು ಇನ್ನೂ ವಿತರಣೆ ಮಾಡಿಲ್ಲ. ತಿಂಗಳಿಗೆ ಒಮ್ಮೆ ಅಕ್ಕಿ ನೀಡುತ್ತಿಲ್ಲ. ವಾಹನ ಸಂಚಾರ ಮಾಡಲಾಗದ ದುರ್ಗಮ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಪಡಿತರ ಮೂಟೆಯನ್ನು ಹೊತ್ತುಕೊಂಡು ಬರಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಎರಡ್ಮೂರು ತಿಂಗಳಿಗೆ ಒಮ್ಮೆ ನ್ಯಾಯಬೆಲೆ ಅಂಗಡಿಯರೇ ತಂದುಕೊಟ್ಟಾಗ ಪಡಿತರವನ್ನು ಪಡೆಯುತ್ತಿದ್ದೇವೆ.-ಚಂದ್ರುನಾಗಮಲೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net