ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಿ

24rajesh6
Published on

ಚಾಮರಾಜನಗರ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಸೋಮವಾರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದ ಮುಖ್ಯದ್ವಾರದಲ್ಲಿ ಸಚಿವರನ್ನು ಭೇಟಿ ಮಾಡಿದ ರೈತರು, ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಕಳೆದ ಸಾಲಿನ ಕಬ್ಬಿನ ಬಾಕಿಯನ್ನು ಕೊಟ್ಟಿಲ್ಲ. ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಕೂಡ ಜಾರಿ ಮಾಡುತ್ತಿಲ್ಲ. ಕಳೆದ ಸಾಲಿನ ಲಾಭ ಅಂಶವನ್ನು ಹಂಚಿಕೆ ಮಾಡುತ್ತಿಲ್ಲ. ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರವನ್ನು ಅಳವಡಿಸಿಲ್ಲ ಹಾಗೂ ಕಟಾವು ಮತ್ತು ಸಾಗಾಣಿಕೆ ಕೂಲಿ ಉತ್ತರ ದಕ್ಷಿಣ ಎಂಬ ತಾರತಮ್ಯವಿದೆ ಇದನ್ನು ನಿವಾರಣೆ ಮಾಡಬೇಕು ಎಂದು ಕೋರಿದರು.

ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಬರ ಪರಿಹಾರವನ್ನು ಪ್ರತಿಯೊಬ್ಬ ರೈತರಿಗೂ ನೀಡಬೇಕು. ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ತಕ್ಷಣ ನೀಡಬೇಕು. ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ 10 ರೂಪಾಯಿ ಪ್ರೋತ್ಸಾಹಧನವನ್ನು ಬರದಿಂದ ನೊಂದಿರುವ ರೈತರಿಗೆ ನೀಡಬೇಕು. ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು. ಕಬ್ಬು ಖರೀದಿ ನಿಯಂತ್ರಣ ಮಂಡಳಿಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯದ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ರವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಮೈಸೂರು ಜಿಲ್ಲಾಧ್ಯಕ್ಷರು ಹಾಡ್ಯ ರವಿ ಅಂಬಳೆ ಮಹದೇವಸ್ವಾಮಿ, ಗಣೇಶ್, ಮಹೇಂದ್ರ ಸತೀಶ್, ಪ್ರವೀಣ್ ಮತ್ತುಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net