ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಚುರುಕು

24rajesh2a
Published on

ಚಾಮರಾಜನಗರ: ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಸಾರ್ವಜನಿಕರ ಕೆಲಸ, ಕಾರ್ಯಗಳು ಚುರುಕುಗೊಳ್ಳುವ ನಿರೀಕ್ಷೆ ಹುಟ್ಟಿಸಿದೆ. ಹಿಂದುಳಿದ ಜಿಲ್ಲೆ ಚಾಮರಾಜನಗರ ಮುಂದುವರಿಯಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದು ಮರು ಮನದಟ್ಟಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿವೃದ್ಧಿ ನಿರೀಕ್ಷೆ ಹುಟ್ಟಿಸಿದೆ.
ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಅಬೀಬ್ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಾಗಿರುವ ಪ್ರಮಾಣ, ಬಿತ್ತನೆ, ರಸಗೊಬ್ಬರ ದಾಸ್ತಾನು ಕುರಿತು ವಿವರ ನೀಡಿದರು. ಅಂಕಿ-ಅಂಶಗಳ ಸರಿಯಾದ ಲೆಕ್ಕ ನೀಡದ ಅಬೀಬ್ ಅವರನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ತರಾಟೆಗೆ ತೆಗೆದುಕೊಂಡರು. ಸಲ್ ಬಿಮಾ ಯೋಜನೆ ಪ್ರಯೋಜನ ಪಡೆಯಬೇಕಾದರೆ ಜಮೀನು ಖಾತೆಯಾಗಿರಬೇಕು. ಇಲ್ಲದಿದ್ದರೆ ಸೌಲಭ್ಯ ದೊರೆಯದಂತಾಗುತ್ತದೆ ಎಂದು ತಾಕೀತು ಮಾಡಿದರು.

ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಎಷ್ಟು ಜನರಿಗೆ ಹಕ್ಕುಪತ್ರ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಸಚಿವ ಕೆ.ವೆಂಕಟೇಶ್ ಧ್ವನಿಗೂಡಿಸಿ, ಜನರು ತಮ್ಮ ಜಮೀನುಗಳಿಗೆ ಖಾತೆ ಮಾಡಿಕೊಡಿ ಎಂದು ಕೇಳಲು ಬರುವುದಲ್ಲ. ಅಧಿಕಾರಿಗಳೇ ಜನರ ಬಳಿಗೆ ಹೋಗಿ ಖಾತೆ ಮಾಡಿಕೊಡುವಂತಾಗಬೇಕು ಎಂದರು.
ಇದಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಜು.1ರಿಂದ ಖಾತೆ ಮಾಡಿಕೊಡುವ ಸಂಬಂಧ ವಿಶೇಷ ಆಂದೋಲನ ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಮೂಲಸೌಕರ್ಯಗಳಿಲ್ಲದೆ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಹೇಳಿದ್ದರು. ಅಲ್ಲಿನ ಜನರಿಗೆ ಸೌಲಭ್ಯ ಒದಗಿಸಿಕೊಡುತ್ತಿಲ್ಲ. ಅರಣ್ಯ ಇಲಾಖೆ ಕಾಮಗಾರಿಗಳು ನಡೆಯುತ್ತಲೇ ಇವೆ. ಆದರೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಾಮಗಾರಿಗಳು ಎಂದಾಗ ಮಾತ್ರ ಅರಣ್ಯ ಇಲಾಖೆ ಅಡ್ಡಿಪಡಿಸುತ್ತದೆ. ಇನ್ನು ಮುಂದೆ ಕಾಮಗಾರಿಗಳೆನ್ನವನ್ನೂ ಅರಣ್ಯ ಇಲಾಖೆಗೆ ಕೊಟ್ಟುಬಿಡಬೇಕು ಎಂದು ಕಿಡಿಕಾರಿದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಧ್ವನಿಗೂಡಿಸಿ, ಹನೂರಿನ ಅರಣ್ಯ ಪ್ರದೇಶದಲ್ಲಿರುವ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಕಳೆದ 2 ವರ್ಷಗಳಿಂದಲೂ ಇದನ್ನೇ ಹೇಳುತ್ತಿದ್ದೇವೆ. ಸಮಸ್ಯೆ ಬಗೆಹರಿದಿಲ್ಲ ಎಂದರು.
ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಕುಡಿಯುವ ನೀರು ಕಲುಷಿತವಾಗಿದೆ. ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಗುಂಡ್ಲಪೇಟೆ ಶಾಸಕ ಗಣೇಶ್‌ಪ್ರಸಾದ್, ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮಂಜೇಗೌಡ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net