

ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ ಇದ್ದರೂ ಹೆಚ್ಚಿನ ಜನರಿಗೆ ಆರೋಗ್ಯ ಸೇವೆ ದೊರಕುತ್ತಿಲ್ಲ ಎಂದು ಕಾವಲು ಪಡೆ ಸಂಘಟನೆ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲೀಕ್ ಹೇಳಿದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಲ್ಲಿ ಎಷ್ಟರಮಟ್ಟಿಗೆ ಆರೋಗ್ಯ ಸೇವೆ ದೊರೆಯುತ್ತಿದೆ ಎನ್ನುವ ಕುರಿತು ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷದಲ್ಲಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕೊಂಡೊಯ್ಯಬೇಕು. ಇಲ್ಲೇ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಕಾರ್ಯವಾಗುತ್ತಿಲ್ಲ. ನೆರೆಯ ಕೇರಳ ಹಾಗೂ ತಮಿಳುನಾಡನ್ನು ಸಂಪರ್ಕಿಸುವ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದರೆ ಸಮರ್ಪಕವಾಗಿ ಚಿಕಿತ್ಸೆ ದೊರಕುತ್ತಿಲ್ಲ. ಅದರಲ್ಲೂ ರಾತ್ರಿ ವೇಳೆ ಆಸ್ಪತ್ರೆಗೆ ಬರುವ ಗರ್ಭಿಣಿಯರು ಸೇರಿದಂತೆ ಎಲ್ಲ ರೋಗಿಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಶಿಫಾರಸು ಮಾಡುತ್ತಿದ್ದಾರೆ. ಆದರೆ ಇಲ್ಲಿ ಒಂದು ಅಂಬುಲೆನ್ಸ್ ಇರುವುದರಿಂದ ಸಕಾಲದಲ್ಲಿ ರೋಗಿಗಳನ್ನು ಬೇರೆಡೆ ಕರೆದೊಯ್ಯಲು ಸಾಧ್ಯವಾಗದಿರುವುದರಿಂದ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.