ಚಾಮರಾಜನಗರ: ತಾಲೂಕಿನ ದೊಡ್ಡರಾಯಪೇಟೆ ಭಾಗದಲ್ಲಿ ವಿದ್ಯುತ್ ಕಂಬಗಳು ಜೋತು ಬಿದ್ದು ಅಪಾಯದ ಅಂಚಿನಲ್ಲಿವೆ. ಈ ಕುರಿತು ಲೈನ್ ಮನ್‌ಗೆ ದೂರು ನೀಡಿದರೂ ಸರಿಪಡಿಸಿಲ್ಲ. ಹೀಗಾಗಿ ಕಂಬಗಳನ್ನು ಸರಿಪಡಿಸಬೇಕೆಂದು ಶಿವರುದ್ರಸ್ವಾಮಿ ಹಾಗೂ ರಂಗಯ್ಯ ಒತ್ತಾಯಿಸಿದರು.
ನಗರದ ಸೆಸ್ಕ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಕಡೆ ಕೇಬಲ್ ತುಂಡಾಗಿವೆ. ಮತ್ತೆ ಕೆಲವು ಕಡೆ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ರೈತರು ರಾತ್ರಿ ವೇಳೆ ತಿರುಗಾಡಲು ಭಯ ಉಂಟಾಗುತ್ತಿದೆ. ಮುಂದೆ ಅನಾಹುತ ಆಗುವ ಮೊದಲು ಕ್ರಮವಹಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರರಾವ್, ತುರ್ತಾಗಿ ಕ್ರಮವಹಿಸಬೇಕೆಂದು ಸಂಬಂಧಪಟ್ಟ ಸಹಾಯಕ ಇಂಜಿನಿಯರ್‌ಗೆ ಸೂಚಿಸಿದರು. ಸೋಮವಾರಪೇಟೆ ನಿವಾಸಿ ರಾಜಮಾಣಿಕ್ಯಂ ದೂರು ನೀಡಿ, ಕೋವಿಡ್ ವೇಳೆ ತಾವು ವಿದ್ಯುತ್ ಬಳಕೆ ಮಾಡಿರುವುದಿಲ್ಲ. ಹಾಗಿದ್ದರೂ 31 ಸಾವಿರ ರೂ. ಬಿಲ್ ಬಂದಿದೆ. ಇದನ್ನು ಸರಿಪಡಿಸಿಕೊಡಬೇಕೆಂದು ಕೋರಿದರು. ಲೆಕ್ಕಾಧಿಕಾರಿಗಳು ಪರಿಶೀಲಿಸಿ ಸರಿಪಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಲೆಕ್ಕಾಧಿಕಾರಿ ಭಾಸ್ಕರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್‌ಕುಮಾರ್, ಸಹಾಯಕ ಇಂಜಿನಿಯರ್‌ಗಳಾದ ಪ್ರವೀಣ್, ನಾಗೇಂದ್ರ, ಕಿರಿಯ ಇಂಜಿನಿಯರ್ ಮಂಜುನಾಥ್, ಚಂದ್ರನಾಯ್ಕ, ಸಹಾಯಕ ಲೆಕ್ಕಾಧಿಕಾರಿ ಮಹದೇವಸ್ವಾಮಿ, ಮಂಜುನಾಥ್ ಇತರರು ಇದ್ದರು.