‘ರೋಪ್ ಟ್ರೈನ್’ನಲ್ಲಿ ವಿದ್ಯಾರ್ಥಿಗಳ ಸಂಚಾರದ ಕನಸು

051
Published on

ಚಾಮರಾಜನಗರ: ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು. ಆದರೆ ಕನಸೇ ಇಲ್ಲದ ಹಾದಿಯಲ್ಲಿ ನಡೆಯುವುದು ಹೇಗೆ..? ಈ ಮಾತಿಗೆ ಸಾಕ್ಷಿ ಎನ್ನುವಂತೆ ಚಾಮರಾಜನಗರ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ‘ರೋಪ್ ಟ್ರೈನ್’ ಎಂಬ ಕನಸಿನ ಪಯಣ ಕಂಡಿದ್ದಾರೆ.

ವಿವಿಯ ಕನ್ನಡ ಮತ್ತು ಜಾನಪದ ವಿಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿ ರೋಪ್ ಟ್ರೈನ್ ಮಾದರಿ ತಯಾರಿಸಿದ್ದಾರೆ. ವಿವಿಯ ಪ್ರವೇಶ ದ್ವಾರದಿಂದ ಕಾಲೇಜಿನ ಮುಖ್ಯದ್ವಾರದವರೆಗೆ ಸುಮಾರು 1 ಕಿ.ಮೀ ನಡೆದುಕೊಂಡು ಹೋಗುವ ಬದಲು ರೋಪ್ ಟ್ರೈನ್ ನಿರ್ಮಿಸಿ ಸಂಚರಿಸುವುದು ಈ ಮಾದರಿಯ ಪ್ರಾಯೋಗಿಕ ಪ್ರಾತ್ಯಕ್ಷಿಕೆ.

ಕನ್ನಡ ಹಾಗೂ ಜಾನಪದ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ಅಲೋಕ್ ಮತ್ತು ಬಸವಣ್ಣ ಸೌರಶಕ್ತಿಯನ್ನು ಉಪಯೋಗಿಸಿಕೊಂಡು ರೋಪ್ ಟ್ರೈನ್ ಮಾದರಿ ಸಿದ್ದಪಡಿಸಿದ್ದಾರೆ. ಈ ರೋಪ್ ಟ್ರೈನ್ ಯೋಜನೆಯನ್ನು ಜಾರಿಗೊಳಿಸಿದರೆ ಕಾಲೇಜಿನ ಪ್ರವೇಶ ದ್ವಾರದಿಂದ ಮುಖ್ಯದ್ವಾರದವರೆಗೆ 1 ಕಿ.ಮೀ ನಡೆದುಕೊಂಡು ಹೋಗುವ ಬದಲು ಒಂದೇ ಬಾರಿಗೆ 20 ವಿದ್ಯಾರ್ಥಿಗಳು ಸಂಚರಿಸಬಹುದಾಗಿದೆ.

ಪ್ರೇರಣೆ: ನಂಜನಗೂಡು-ಚಾಮರಾಜನಗರ ಮುಖ್ಯರಸ್ತೆಯಿಂದ ಕಾಲೇಜಿಗೆ ತಲುಪಲು ಸುಮಾರು 1 ಕಿ.ಮೀ ಅಂತರವಿದ್ದು, ಬೆಳಿಗ್ಗೆ ಮತ್ತು ಸಂಜೆ 2 ಬಸ್ ಸಂಚಾರ ಬಿಟ್ಟರೆ, ನಂತರದಲ್ಲಿ ಕ್ಯಾಂಪಸ್‌ಗೆ ಬಸ್ ಸೌಲಭ್ಯವಿರುವುದಿಲ್ಲ. ಈ ವೇಳೆ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗ ನಡೆದುಕೊಂಡೆ ಕಾಲೇಜಿಗೆ ಬರುತ್ತಾರೆ. ಇದನ್ನು ಮನಗಂಡ ವಿದ್ಯಾರ್ಥಿಗಳಾದ ಅಲೋಕ್ ಮತ್ತು ಬಸವಣ್ಣ ವಿವಿಯ ದೂರದೃಷ್ಠಿ ಇಟ್ಟುಕೊಂಡು ರೋಪ್ ಟ್ರೈನ್ ಮಾದರಿ ತಯಾರಿಸಿದ್ದಾರೆ.

ಹೇಗಿದೆ ರೋಪ್ ಟ್ರೈನ್?
ರೋಪ್‌ಟ್ರೈನ್ ಮಾದರಿ ರಸ್ತೆ ಪಕ್ಕದಲ್ಲೇ ಇರುವಂತೆ ರೂಪುಗೊಳಿಸಲಾಗಿದೆ. ಇದು ನೋಡಲು ಅಚ್ಚರಿಯನ್ನು ಉಂಟುಮಾಡುತ್ತದೆ. ಹಳಿಗಳನ್ನು ಅಳವಡಿಸಿ, ಅದರ ಮೇಲೆ ರೋಪ್ ಮೂಲಕ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ಸೌರಶಕ್ತಿ ಬಳಕೆ ಮಾಡಿಕೊಂಡು ಸ್ವಯಂ ಚಾಲಿತವಾಗಿ ಸಂಚರಿಸಲಿದೆ. ಇದರ ತಯಾರಿಕೆಗೆ 3 ಅಡಿ ಉದ್ದ ಹಾಗೂ 4ಅಡಿ ಅಗಲದ ಹಲಗೆ, ಚಿಕ್ಕದಾದ 10 ಬೇರಿಂಗ್, ಒಂದು ಡಿಸಿ ಮೋಟಾರ್, ಥರ್ಮೋಕೋಲ್ ಶೀಟ್ ಹಾಗೂ ಒಂದು ರೋಪ್ ಉಪಯೋಗಿಸಲಾಗಿದೆ. ಇದರಲ್ಲಿ ಎರಡು ರೋಪ್ ಟ್ರೈನ್‌ಗಳು ಸಂಚರಿಸುವಂತೆ ರೂಪಿಸಲಾಗಿದೆ. ಈ ಮಾದರಿಯನ್ನು ಅಳವಡಿಸಿಕೊಂಡರೆ ವಿಶ್ವವಿದ್ಯಾಲಯಕ್ಕೆ ಮತ್ತಷ್ಟು ಕೀರ್ತಿ ದೊರೆಯುತ್ತದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಅನುಷ್ಠಾನಕ್ಕೆ ಬೇಕು 1 ಕೋಟಿ ರೂ.:
ರೋಪ್ ಟ್ರೈನ್ ಯೋಜನೆಯನ್ನು ಅಳವಡಿಸಿಕೊಳ್ಳಲು, ಅಂದಾಜು 1 ಕೋಟಿ ರೂ. ಬೇಕಾಗುತ್ತದೆ. ಬೇರೆ ವಿವಿಗಳ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳು ಸಂಚರಿಸಲು ಉಚಿತ ಸೈಕಲ್ ಹಾಗೂ ಸ್ಕೂಟರ್ ಸೌಲಭ್ಯಗಳನ್ನು ನೀಡಲಾಗಿದೆ. ಇದೇ ತರಹ ರೋಪ್‌ಟ್ರೈನ್ ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾದರಿ ತಯಾರಿಸಿರುವ ವಿದ್ಯಾರ್ಥಿಗಳು ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದಾರೆ.

ಕಾಲೇಜಿನಲ್ಲಿ ರೋಪ್ ಟ್ರೈನ್ ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುವ ದೂರದೃಷ್ಠಿ ಇಟ್ಟುಕೊಂಡು ಈ ಮಾದರಿ ತಯಾರಿಸಿದ್ದೇವೆ.-ಅಲೋಕ್, ವಿದ್ಯಾರ್ಥಿ, ಜಾನಪದ ವಿಭಾಗ, ವಿವಿ, ಚಾಮರಾಜನಗರ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಹಿಂದೆ 2 ಎಲೆಕ್ಟ್ರಿಕ್ ವಾಹನ ನೀಡುವಂತೆ ಶಾಸಕರಿಗೆ ಮನವಿ ಮಾಡಲಾಗಿತ್ತು. ಈಗ ವಿದ್ಯಾರ್ಥಿಗಳು ಪ್ರಸ್ತುತಪಡಿಸಿರುವ ರೋಪ್ ಟ್ರೈನ್ ಮಾದರಿ ತುಂಬಾ ಚೆನ್ನಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.-ಪ್ರೋ.ಮಾದೇಶ್, ಕುಲ ಸಚಿವ, ವಿಶ್ವವಿದ್ಯಾಲಯ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net