ಧಮ್ಮಯಾನ ಪುಸ್ತಕ ಬಿಡುಗಡೆ

Published on

ಚಾಮರಾಜನಗರ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಬರೆದಿರುವ ಧಮ್ಮಯಾನ ಪುಸ್ತಕ ಧಮ್ಮ ಕಲಿತು, ಕಲಿಸುವವರಿಗೆ ಉಪಯುಕ್ತ ಎಂದು ಕೊಳ್ಳೇಗಾಲದ ಜೇತವನದ ಬುದ್ಧ ವಿಹಾರದ ಭಂತೆ ಮನೋರಕ್ಕಿತ ಥೇರಾ ಹೇಳಿದರು.

ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧಮ್ಮಯಾನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಪ್ರಸ್ತುತ ಇಡೀ ವಿಶ್ವವೇ ಬುದ್ಧನತ್ತ ಮುಖ ಮಾಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧಧರ್ಮ ಸ್ವೀಕಾರ ಮಾಡಿದ ಮೇಲೆ ದೇಶದಲ್ಲಿ ಧಮ್ಮಕ್ರಾಂತಿ ನಡೆಯಿತು. ಶೋಷಿತ ಸಮುದಾಯಗಳ ಸಮಾಜಿಕ ಬಂಧ ವಿಮೋಚನೆಗಾಗಿ ಬೌದ್ಧಧಮ್ಮವೇ ಮಹಾಮಾರ್ಗವಾಗಿದೆ. ಈ ನೆಲದ ಮೂಲಧಮ್ಮವನ್ನು ಸ್ವೀಕರಿಸಿದವರು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿದ್ದಾರೆ. ಈ ಗ್ರಂಥವು ಮೂಲ ತ್ರಿಪಿಟಕ ಗ್ರಂಥಗಳ ಆಧಾರದ ಮೇಲೆ ರಚಿತವಾಗಿದೆ. ಓದುಗರಿಗೆ ಸರಳವಾಗಿ, ಅರ್ಥವಾಗುತ್ತದೆ. ಧಮ್ಮ ಕಲಿತು, ಕಲಿಸುವವರಿಗೆ ಉಪಯುಕ್ತ ಎಂದರು.

ವಿಮರ್ಶಕ ಡಾ.ಬಿ.ಆರ್.ಕೃಷ್ಣಕುಮಾರ್ ಧಮ್ಮಯಾನ ಪುಸ್ತಕದ ಕುರಿತು ಮಾತನಾಡಿ, ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬರೆದಿರುವ ಧಮ್ಮಯಾನ ಗ್ರಂಥ ಅತ್ಯಂತ ಸರಳವಾಗಿ ಕಾವ್ಯಾತ್ಮಕವಾಗಿ ರಸವತ್ತಾಗಿ ಕಥೆ ರೂಪದಲ್ಲಿದೆ. ಎಲ್ಲರೂ ಸುಲಭವಾಗಿ ಓದಲು ಪ್ರೇರೇಪಿಸುತ್ತದೆ. ಅವರ ಬೌದ್ಧ ಧಮ್ಮ ಚಿಂತನೆಯನ್ನು ಪಸರಿಸುತ್ತದೆ ಎಂದರು.

ಮೂಡ್ನಾಕೂಡು ಚಿನ್ನಸ್ವಾಮಿ ಅವರು ದಲಿತ ಸಾಹಿತ್ಯೋತ್ತರ ಕಾಲದಲ್ಲಿ ತಮ್ಮ ಬೌದ್ಧ ಪರಂಪರೆಯನ್ನಿಟ್ಟುಕೊಂಡು ಕಾವ್ಯದ ಮೂಲಕ ಹೊಸ ಚಿಂತನೆಯನ್ನು ಬೆಳೆಸಿದ್ದರು. ಅವರಿಗೆ ಬೌದ್ಧ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಜಿಲ್ಲೆಗೆ ಕನ್ನಡನಾಡಿಗೆ ಹೆಮ್ಮೆಯಾಗಿದೆ ಎಂದು ಹೇಳಿದರು.
ಬಿಎಸ್‌ಐ ಜಿಲ್ಲಾಧ್ಯಕ್ಷ ಆರ್.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಬಿಎಸ್‌ಐ ಜಿಲ್ಲಾ ಕಾರ್ಯದರ್ಶಿ ನಂಜುಂಡಯ್ಯ, ಖಜಾಂಚಿ ಸೋಮಣ್ಣ, ಮಹಿಳಾ ಘಟಕದ ಉಪಾಧ್ಯಕ್ಷೆ ನಾಗಶಿಲ್ಪ, ನಿವೃತ್ತ ಪ್ರಾಂಶುಪಾಲ ಶಿವಣ್ಣ, ಉಪನ್ಯಾಸಕ ವಿಶ್ವನಾಥ್ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net