

ಚಾಮರಾಜನಗರ: ಇಂಡಿಯನ್, ವೆಸ್ಟರ್ನ್ ಶೌಚಾಲಯ, ಅತ್ಯಾರ್ಷಕವಾದ ಸ್ನಾನದ ಕೊಠಡಿ, ಹೊರಾಂಗಣದಲ್ಲಿ ಹುಲ್ಲುಹಾಸು, ಅಂದಾಜು 32 ಲಕ್ಷ ರೂ. ಹಣದಲ್ಲಿ ನಗರಸಭೆ ವತಿಯಿಂದ ಮಹತ್ವಾಕಾಂಕ್ಷೆಯ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ.
ನಗರದ ಜಿಲ್ಲಾ ಗ್ರಂಥಾಲಯದ ಸಮೀಪದಲ್ಲಿ ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆಯ ಅಡಿಯಲ್ಲಿ ಚಾಮರಾಜನಗರ ನಗರಸಭೆ ವತಿಯಿಂದ ಅಂದಾಜು 32 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಕರ್ಷಕವಾದ ಶೌಚಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಶೌಚಾಲದಲ್ಲಿ ಪುರುಷರಿಗೆ ಪ್ರತ್ಯೇಕವಾದ 2 ಇಂಡಿಯನ್ ಟಾಯ್ಲೆಟ್, 1 ವೆಸ್ಟರ್ನ್ ಟಾಯ್ಲೆಟ್, 1 ವೆಸ್ಟರ್ನ್ ಟಾಯ್ಲೆಟ್ ಒಳಗೊಂಡ ಸ್ನಾನದ ಗೃಹ, ಪುರುಷ ಅಂಗವಿಕಲರಿಗೆ ಅನುಕೂಲವಾಗುವಂತೆ ವ್ಯವಸ್ಥಿತವಾದ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಿಳೆಯರಿಗೂ ಪ್ರತ್ಯೇಕವಾದ 2 ಇಂಡಿಯನ್ ಟಾಯ್ಲೆಟ್, 1 ವೆಸ್ಟರ್ನ್ ಟಾಯ್ಲೆಟ್, 1 ವೆಸ್ಟರ್ನ್ ಟಾಯ್ಲೆಟ್ ಒಳಗೊಂಡ ಸ್ನಾನದ ಗೃಹ, ಅಂಗವಿಕಲರಿಗೆ ಪತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಅದಲ್ಲದೇ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 1 ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಿಷಿನ್ ಹಾಗೂ ಮಕ್ಕಳಿಗೆ ಹಾಲುಣಿಸುವ 1 ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದೆ.
ಅದಲ್ಲದೇ 1 ಡ್ರೆಸ್ಸಿಂಗ್ ರೂಂ, 1 ಪರಿಚಾರಕ ಕೊಠಡಿ ಹಾಗೂ ತೃತೀಯ ಲಿಂಗಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಶೌಚಾಲಯದಲ್ಲಿ ಸುಮಾರು 1000 ಲೀಟರ್ ನೀರು ಸಂಗ್ರಹಕ್ಕೆ ಅನುಕೂಲವಾಗುವಂತೆ, 2 ಟ್ಯಾಂಕ್ ಅಳವಡಿಸಲಾಗಿದೆ. ದಿನದ 24 ಗಂಟೆಗಳು ಕೂಡ ನಿರಂತರವಾಗಿ ನೀರು ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯದ ಸುತ್ತಲೂ ನಮ್ಮ ಜಿಲ್ಲೆಯ ಜಾನಪದ ಕಲೆಯನ್ನು ಸಾರುವ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಹೊರಾಂಗಣದಲ್ಲಿ ಉತ್ತಮವಾದ ಹುಲ್ಲುಹಾಸು ನಿರ್ಮಿಸಲಾಗುತ್ತದೆ. ಈ ಮೂಲಕ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಂದು ಅತ್ಯಾಕರ್ಷಕ ಶೌಚಾಲವನ್ನು ನಗರಸಭೆ ನಿರ್ಮಾಣ ಮಾಡಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗುವ ಸಾಧ್ಯತೆ ಇದೆ ಎಂದು ನಗರಸಭೆ ಎಇಇ ನಟರಾಜ್ ವಿಜಯವಾಣಿಎಗೆ ಮಾಹಿತಿ ನೀಡಿದರು.
ಪ್ರಯಾಣಿಕರಿಗೆ ಅನುಕೂಲ:
ತಮಿಳುನಾಡು, ಕೇರಳಾ ರಾಜ್ಯಗಳಿಗೆ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಮಹತ್ವಾಕಾಂಕ್ಷೆಯ ಶೌಚಾಲಯ ಅನುಕೂಲವಾಗಲಿದೆ. ಸ್ನಾನದ ಕೊಠಡಿಯನ್ನು ಒಳಗೊಂಡಿರುವುದರಿಂದ ದೂರ ಪ್ರಯಾಣ ಮಾಡುವವರಿಗೆ, ಈ ಭಾಗದಲ್ಲಿ ಸಾಗುವ ನೆರೆರಾಜ್ಯಗಳ ಪ್ರಯಾಣಿಕರು ಹಾಗೂ ಯಾತ್ರಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಂಗವಿಕಲರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಶೌಚಾಲಯದ ಬಾಗಿಲ ಬಳಿಗೆ ತೆರಳುವಂತೆ ಅನುಕೂಲಮಾಡಲಾಗಿದೆ.