

ಚಾಮರಾಜನಗರ: ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 50ಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಗಡಿಜಿಲ್ಲೆ ಚಾಮರಾಜನಗರದಲ್ಲಿ ಈ ಹಿಂದೆ ಕಳ್ಳಭಟ್ಟಿ ತಯಾರಿಸುತ್ತಿದ್ದ ಗ್ರಾಮಗಳ ಮೇಲೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಹಲವೆಡೆ ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಯಾವ ಗ್ರಾಮದಲ್ಲೂ ಕೂಡ ಕಳ್ಳಭಟ್ಟಿ ತಯಾರು ಮಾಡುವುದಿಲ್ಲ. ಆದರೆ ಈ ಹಿಂದೆ ಸುಮಾರು 13 ಕಳ್ಳಭಟ್ಟಿ ತಯಾರಿಸುವ ಗ್ರಾಮಗಳನ್ನು ಅಬಕಾರಿ ಇಲಾಖೆಯಿಂದ ಗುರುತು ಮಾಡಲಾಗಿತ್ತು. ತಮಿಳುನಾಡಿನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಿಂದಾಗಿ ಗಡಿಜಿಲ್ಲೆಯ ಅಬಕಾರಿ ಇಲಾಖೆ ಹಾಗೂ ಪೋಲೀಸರು ಎಚ್ಚೆತ್ತುಕೊಂಡಿದ್ದು, ಚಾಮರಾಜನಗರ, ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 13 ಗ್ರಾಮಗಳ ಮೇಲೆಯೂ ಜೂ.20 ಮತ್ತು 21 ರಂದು ದಾಳಿ ನಡೆಸಿದ್ದಾರೆ. ಆ ಗ್ರಾಮಗಳಲ್ಲಿ ಹಿಂದೆ ಕಳ್ಳಭಟ್ಟಿ ತಯಾರು ಮಾಡುತ್ತಿದ್ದ ಹಳೆ ಆರೋಪಿಗಳ ಮನೆಯನ್ನು ಪರಿಶೀಲಿಸಿದ್ದಾರೆ.
ಈ ಗ್ರಾಮಗಳಲ್ಲಿ ಹೆಚ್ಚಾಗಿ ತಮಿಳುನಾಡಿನ ಮೂಲದವರೇ ಹೆಚ್ಚಾಗಿ ವಾಸಮಾಡುತ್ತಿರುವುದರಿಂದ ಹಾಗೂ ತಮಿಳುನಾಡಿನವರೇ ಹೆಚ್ಚಾಗಿ ಕಳ್ಳಭಟ್ಟಿ ದಂಧೆಯಲ್ಲಿ ಭಾಗಿಯಾಗುವುದರಿಂದ ಮುಂಜಾಗೃತ ಕ್ರಮವಾಗಿ ಅಬಕಾರಿ ಇಲಾಖೆ ಹಾಗೂ ಪೋಲೀಸ್ ಇಲಾಖೆ ಮೊದಲೇ ಎಚ್ಚೆತ್ತಿಕೊಂಡು, ಈ ಹಿಂದೆ ಕಳ್ಳಭಟ್ಟಿ ತಯಾರಿಸುತ್ತಿದ್ದ ಆರೋಪಿಗಳು ಹಾಗೂ ಆ ಗ್ರಾಮಗಳ ಗ್ರಾಮಸ್ಥರಿಗೂ ತಿಳುವಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ ಮೃತ ಪಟ್ಟಿರುವ ಪ್ರಕರಣಗಳು ಈ ವರೆಗೂ ಯಾವುದು ಕಂಡುಬಂದಿಲ್ಲ. ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತ ಸಂಭವಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮತ್ತು ನಾವು ಒಟ್ಟಿಗೆ ಸೇರಿ ಈ ದಾಳಿ ಕೈಗೊಂಡಿದ್ದೇವೆ ಎಂದು ಅಬಕಾರಿ ಆಯುಕ್ತ ನಾಗಶಯನ ವಿಜಯವಾಣಿಗೆ ಮಾಹಿತಿ ನೀಡಿದರು.
ಗಡಿಗ್ರಾಮಗಳಲ್ಲಿ ದಾಳಿ:
ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಗ್ರಾಮಗಳಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿದೆ. ಜೂ.20 ರಂದು ಚಾಮರಾಜನಗರ ತಾಲೂಕಿನ ಹಳೆ ಕಳ್ಳಭಟ್ಟಿ ಗ್ರಾಮಗಳಾದ ಕೋಳಿಪಾಳ್ಯ, ಮೂಕನಪಾಳ್ಯ ಮತ್ತು ಕೊಳ್ಳೇಗಾಲ, ಹನೂರು ತಾಲೂಕಿನ ಇನ್ನಿತರೆ ಗ್ರಾಮಗಳ ಮೇಲೆ ದಾಳಿ ನಡೆಸಿ ಕಳ್ಳಭಟ್ಟಿ ತಯಾರಿಕೆ ನಡೆಯುತ್ತಿದೆಯೇ ಎಂದು ಪರಿಶೀಲಿಸಲಾಗಿದೆ. ಜೂ.21 ರಂದು ಹನೂರು ತಾಲೂಕು ವ್ಯಾಪ್ತಿಯ ಹಳೆ ಕಳ್ಳಭಟ್ಟಿ ಗ್ರಾಮಗಳಾದ ಪುಷ್ಪಾಪುರ, ಕೋಟೆಪೊದೆ, ತಾಂಡ ಮೇಡು, ಬಿದರಹಳ್ಳಿ, ಹಾಗೂ ಮಾರ್ಟಳ್ಳಿ ಗ್ರಾಮಗಳಲ್ಲಿ ಕಳ್ಳಭಟ್ಟಿ ದಾಳಿ ಮಾಡಿ ಪರಿಶೀಲಿಸಲಾಗಿದೆ. ಈ ದಾಳಿಯಿಂದ ಎಲ್ಲೂ ಕೂಡ ಕಳ್ಳಭಟ್ಟಿ ತಯಾರಿಕೆ ಮಾಡುತ್ತಿಲ್ಲ ಎಂಬುದು ತಿಳಿದುಬಂದಿದೆ. ಆದರೆ ತಮಿಳುನಾಡಿನ ಮೂಲದವರೇ ಈ ಗ್ರಾಮಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತಿರುವುದರಿಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಜಿಲ್ಲೆಯಲ್ಲಿ ಕಳ್ಳಭಟ್ಟಿ ದುರಂತವಿಲ್ಲ:
ಈ ಹಿಂದೆ ಕಾಡಂಚಿನ ಗ್ರಾಮಗಳಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದರೂ ಎಂಬುವುದನ್ನು ಬಿಟ್ಟರೇ ಜಿಲ್ಲೆಯಲ್ಲಿ ಕಳ್ಳಭಟ್ಟಿ ದುರಂತಗಳು ಈ ವರೆಗೂ ಸಂಭವಿಸಿಲ್ಲ. ಕಾಡುಗಳ್ಳ ವೀರಪ್ಪನ್ ಹಾವಳಿ ಹೆಚ್ಚಾಗಿದ್ದ ಸಮಯದಲ್ಲಿ ಹನೂರು, ಕೊಳ್ಳೇಗಾಲ, ಚಾಮರಾಜನಗರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಎಗ್ಗಿಲ್ಲದೇ ಕಳ್ಳಭಟ್ಟಿ ತಯಾರು ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಈ ವರೆಗೂ ಯಾವುದೇ ದುರಂತಗಳು ಸಂಭವಿಸಿಲ್ಲ. ಕಳ್ಳಭಟ್ಟಿಗೆ ಮೆಥನಾಲ್ ಮಿಶ್ರಣ ಮಾಡುವುದರಿಂದ ಕಳ್ಳಭಟ್ಟಿ ಸೇವನೆ ಮಾಡುವವರಿಗೆ ಅಪಾಯ ಸಂಭವಿಸುತ್ತದೆ. ತಮಿಳುನಾಡಿನಲ್ಲಿ ಇಥೆನಾಲ್(ಸ್ಪಿರಿಟ್) ಸಾಗಿಸುವ ವಾಹನಗಳಲ್ಲಿ ಕಳ್ಳಭಟ್ಟಿ ಮಾರುವವರು ಇಥೆನಾಲ್ ಖರೀದಿಸಿ ನೀರಿಗೆ ಬೆರೆಸಿ ಮಾರಾಟ ಮಾಡುತ್ತಾರೆ. ಇದು ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಆದರೆ ಕೆಲವೊಮ್ಮೆ ಇಥೆನಾಲ್ ಬದಲಾಗಿ ಮೆಥನಾಲ್ ಖರೀದಿಸಿ ಮಿಶ್ರಣ ಮಾಡುತ್ತಾರೆ. ಇದನ್ನು ಸೇವಿಸಿದರೆ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪುತ್ತಾನೆ.
ತಮಿಳುನಾಡಿನಲ್ಲಿ ನಡೆದಿದೆ ದುರಂತ:
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 55 ಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿರುವ ದುರಂತ ನಡೆದಿದೆ. ಈ ಪ್ರಕರಣದಲ್ಲೂ ಕಳ್ಳಭಟ್ಟಿಯಲ್ಲಿ ಮೆಥನಾಲ್ ಮಿಶ್ರಣವಾಗಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಮೃತರ ಸಂಖ್ಯೆ 55ಕ್ಕೆ ಏರಿಕೆಯಾಗಿದ್ದು, 100 ಕ್ಕಿಂತಲೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯಲ್ಲಿ ಈ ಹಿಂದೆ ಕಳ್ಳಭಟ್ಟಿ ತಯಾರು ಮಾಡುತ್ತಿದ್ದ ಸುಮಾರು 13 ಗ್ರಾಮಗಳನ್ನು ಗುರುತಿಸಲಾಗಿತ್ತು. ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತ ಸಂಭವಿಸಿರುವಿದರಿಂದ ಹಾಗೂ ತಮಿಳು ಮೂಲದವರೇ ಹೆಚ್ಚಾಗಿ ಈ ಗ್ರಾಮಗಳಲ್ಲಿ ವಾಸ ಮಾಡುತ್ತಿರುವುದರಿಂದ ಕಾರ್ಯಾಚರಣೆ ಮಾಡಲಾಗಿದೆ. ಪೋಲೀಸ್ ಇಲಾಖೆಯವರು ನಮ್ಮೊಂದಿಗೆ ಕೈಜೋಡಿಸಿದ್ದಾರೆ.-ನಾಗಶಯನ, ಆಯುಕ್ತ, ಅಬಕಾರಿ ಇಲಾಖೆ, ಚಾಮರಾಜನಗರ