

ಚಾಮರಾಜನಗರ: ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದಲ್ಲಿ ಹಣ ದುರ್ಬಳಕೆ ಸಂಬಂಧ ನನ್ನ ವಿರುದ್ಧ ಆರೋಪ ಮಾಡಿರುವ ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯರ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧವಾಗಿದ್ದೇನೆ ಎಂದು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಎಸ್.ಮಹದೇವಯ್ಯ ಹೇಳಿದರು.
ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಅಕ್ರಮ ಪರಭಾರೆ ಹಾಗೂ ಲೆಕ್ಕಪತ್ರಗಳಲ್ಲಿ ಲೋಪ ಮತ್ತು ಹಣ ದುರುಪಯೋಗ ಪ್ರಕರಣದಲ್ಲಿ ನನ್ನ ವಿರುದ್ಧ ಕಿಂಗ್‌ಪಿನ್ ಹೇಳಿಕೆ ಸಂಬಂಧ ಈಗಾಗಲೇ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಸಂಘದಲ್ಲಿ 7 ಲಕ್ಷ ರೂ. ಹಣವನ್ನು ನಾನು ಬಳಸಿಕೊಂಡಿರುವುದು ಸಾಬೀತಾದರೆ ಸಂಘಕ್ಕೆ ಎರಡರಷ್ಟು ಹಣ ಕಟ್ಟಲು ಸಿದ್ದವಾಗಿದ್ದೇನೆ. ಒಂದು ವೇಳೆ ಅದು ಸುಳ್ಳಾದರೆ ಎರಡರಷ್ಟು ಹಣ ಕಟ್ಟಲು ಅಯ್ಯನಪುರ ಶಿವಕುಮಾರ್ ಸಿದ್ಧರಿದ್ದಾರೆಯೇ ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಈ ಪ್ರಕರಣ ತನಿಖೆ ನಡೆಸಿದ ಅಧಿಕಾರಿಗಳು ಸಂಘಕ್ಕೆ ನೋಟಿಸ್ ಕೊಡುವ ಮೊದಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದರಿಂದಾಗಿ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆ ಎಂಬುದು ಕಂಡುಬರುತ್ತದೆ. ಆಗೆಯೇ ಕಾಣದ ಕೈಗಳು ಇದರಲ್ಲಿ ಸಾಕಷ್ಟು ಕೆಲಸ ಮಾಡಿದೆ. ಸಂಘದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ. ಇವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ರಾಮಚಂದ್ರ ಶಿಕ್ಷಣ ಸಂಸ್ಥೆಗೆ ಆದಿ ಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಸೇರಿದ 378/1ಎ ನಲ್ಲಿ ಇರುವ 1.4 ಎಕರೆ ಜಾಗವನ್ನು ರಾಮಚಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸಂಸ್ಥೆಗೆ ಜಾಗವನ್ನು ಪರಭಾರೆ ಮಾಡಿಕೊಡಿ ಎಂದು ಪತ್ರ ಬರೆದಾಗ ಅದಕ್ಕೆ ನಮ್ಮ ಸಂಘದ ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ಇಟ್ಟು ತೀರ್ಮಾನಿಸಬೇಕಿದೆ ಎಂದು ನಿರಾಕರಿಸಿದ್ದರು. ಇದರಿಂದ ಪ್ರಮುಖರೊಬ್ಬರು ಸಂಘವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರದಿಂದ ಆಸ್ತಿ ಸಂರಕ್ಷಣಾ ಸಮಿತಿ ಹುಟ್ಟಿಕೊಂಡು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಸಂಘಕ್ಕೆ ಸೇರಿದ ಜಾಗವವನ್ನು 30 ವರ್ಷ ಲೀಸ್ ನೀಡುವಾಗ ಅದನ್ನು ರಿಜಿಸ್ಟಾರ್ ಮಾಡುವಾಗ ಆ ಅಧಿಕಾರಿಗೆ 30 ವರ್ಷ ರಿಜಿಸ್ಟ್ರಾರ್ ಮಾಡಲು ಅಧಿಕಾರವಿಲ್ಲ ಎಂಬುದು ತಿಳಿಯದೇ ಮಾಡಿದ್ದಾರೆಯೇ?, ಸುಮ್ಮನೆ ಇಲ್ಲಸಲ್ಲದನ್ನು ಹೇಳುವುದು ಸರಿಯಲ್ಲ. ಆಸ್ತಿ ಪರಭಾರೆ ವಿಚಾರ ಬಗ್ಗೆ ಮಾತನಾಡಲು ನಾನು ಶಿವಕುಮಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದೆ. ಆದರೆ, ಅವರೇ ಬಾರದೇ ಈಗ ನಮ್ಮ ಮೇಲೆ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ. ಸಂಘದ ಕಚೇರಿಯಲ್ಲಿ ಇಲ್ಲವೇ ಸಿದ್ದಾರ್ಥ ಕಾಲೇಜಿನಲ್ಲಿ ಸಭೆ ಕರೆಯಲು ತಿಳಿಸಿದ್ದಾಗಲೂ ಬರಲಿಲ್ಲ. ನೀವೆ ಜಾಗ ಗುರುತು ಮಾಡಿ ನಾವೇ ಬರುತ್ತೇವೆ ಎಂದಾಗಲೂ ಅದಕ್ಕೂ ಸ್ಪಂದನೆ ನೀಡಲಿಲ್ಲ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ವತಿಯಿಂದ ಎರಡು ಕಡೆಯವರನ್ನು ಸಭೆ ಕರೆಯಲು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ. ಅವರು ಸಭೆ ಕರೆದರೇ ಸಂಘದ ಪದಾಧಿಕಾರಿಗಳು ಬರಲು ಸಿದ್ಧರಾಗಿದ್ದೇವೆ. ಈ ವಿಚಾರವನ್ನು ಕುಳಿತು ಬಗೆಹರಿಸಿಕೊಳ್ಳುವುದು ಸರಿಯಾದ ನಡೆಯಾಗಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಖಜಾಂಚಿ ರವಿಕುಮಾರ್, ನಿರ್ದೇಶಕರಾದ ಕಾಂತರಾಜು, ನಾಗರಾಜು ಹಾಜರಿದ್ದರು.