ಕಂಪ್ಯೂಟರ್ ತರಬೇತಿ ಪಡೆದ ಕಾರಾಗೃಹ ಬಂಧಿಗಳು

21rajesh1
Published on

ಚಾಮರಾಜನಗರ : ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ವಿನೂತನ ಅರ್ಥಪೂರ್ಣ ಕಾರ್ಯಕ್ರಮ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿಯಿಂದ ಯಶಸ್ಸು ಕಂಡಿದೆ.

ನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ನೀಡಿ ಅವರು ಬಿಡುಗಡೆಗೊಂಡ ಬಳಿಕ ಬದುಕು ಕಟ್ಟಿಕೊಳ್ಳಲು ನೆರವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿ ನೀಡಲು ಯೋಚಿಸಿ ಮೈಸೂರಿನ ಇನ್‌ಫೋಸಿಸ್, ರೋಟರಿ ಪಂಚಶೀಲ ಸಂಸ್ಥೆಗಳು ಹಾಗೂ ಸಿಎಸ್‌ಆರ್ ನೆರವಿನೊಂದಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ತರಬೇತಿಗೆ ಜಿಲ್ಲಾಧಿಕಾರಿ ಚಾಲನೆ ನೀಡಿದ್ದರು.

ಕಾರಾಗೃಹದಲ್ಲಿನ ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳೊಂದಿಗೆ ತರಬೇತಿ ಆರಂಭವಾಗಿತ್ತು. ತರಬೇತಿಗಾಗಿ 38 ವಿಚಾರಣಾಧೀನ ಬಂಧಿಗಳು ನೊಂದಣಿಯಾಗಿದ್ದರು. ಇವರಲ್ಲಿ 7 ಬಂಧಿಗಳು ಕಾರಾಗೃಹದಲ್ಲಿಯೇ ಕಂಪ್ಯೂಟರ್‌ನ ವಿವಿಧ ಕೋರ್ಸುಗಳನ್ನು ಕಲಿತು ಯಶಸ್ವಿಯಾಗಿ ಪೂರ್ಣಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಂದ ಗುರುವಾರ ಪ್ರತಿಷ್ಠಿತ ಇನ್‌ಫೋಸಿಸ್ ಸಂಸ್ಥೆಯ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಈ ಮೂಲಕ ಚಾಮರಾಜನಗರ ಜಿಲ್ಲೆ ಸಾರ್ಥಕತೆ ಕಾರ್ಯ ಕೈಗೊಂಡು ರಾಜ್ಯದಲ್ಲೇ ವಿಶಿಷ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾರಾಗೃಹ ಕಟ್ಟಡದಲ್ಲಿಯೇ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಇನ್‌ಫೋಸಿಸ್ ಸಹಕಾರದೊಂದಿಗೆ ಐಐಎಚ್‌ಟಿ ಟೆಕಾಡಮಿ ಬೋಧಕರನ್ನ ನಿಯೋಜಿಸಲಾಗಿದೆ. ಬಂಧಿಗಳಿಗೆ ಮೈಕ್ರೋಸಾಫ್ಟ್ ಆಫೀಸ್, ಕಂಪ್ಯೂಟರ್ ಫಂಡಮೆಂಟಲ್, ಸಾಫ್ಟ್ ಸ್ಕಿಲ್ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಮೊದಲನೇ ತಂಡದಲ್ಲಿ 38 ಬಂಧಿಗಳು ಕಂಪ್ಯೂಟರ್ ಕೋರ್ಸುಗಳನ್ನು ಕಲಿಯಲು ಆರಂಭಿಸಿದರು. ಇವರಲ್ಲಿ ಯಶಸ್ವಿಯಾಗಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 7 ಮಂದಿಗೆ ಇನ್‌ಫೋಸಿಸ್ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ. 13 ಬಂಧಿಗಳು ಸಕ್ರೀಯವಾಗಿ ಕೋರ್ಸುಗಳಲ್ಲಿ ಪಾಲ್ಗೊಂಡು ವಿಶೇಷ ಗಮನಸೆಳೆದಿದ್ದು, ಇವರ ಕಲಿಕೆ ಮುಂದುವರೆದಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಕಾರಾಗೃಹದ ಅಧೀಕ್ಷಕ ಎನ್.ಎಸ್.ಶಿವಕುಮಾರ್, ಇನ್‌ಫೋಸಿಸ್ ಸಂಸ್ಥೆಯ ಪ್ರೋಗ್ರಾಂ ವ್ಯವಸ್ಥಾಪಕ ಬಿಳಿಗಿರಿರಂಗ, ಐಐಎಚ್‌ಟಿ ಸಂಸ್ಥೆಯ ಬೋಧಕ ಮುಖ್ಯಸ್ಥ ಶಿವಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net