ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕಕ್ಕೆ ಆಗ್ರಹ

21raju11
Published on

ಚಾಮರಾಜನಗರ: ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಮಿಳುನಾಡು ಗುಮಟಾಪುರಕ್ಕೆ ಹೊಂದಿಕೊಂಡಿರುವ ಕಂದಾಯ ಗ್ರಾಮದಲ್ಲಿ 14 ವಾಸದ ಮನೆಗಳು ಇದ್ದು ರೈತರು 18 ಕೊಳವೆ ಭಾವಿಗಳನ್ನು ಹೊಂದಿದ್ದರೂ ವಿದ್ಯುತ್ ಸಂಪರ್ಕ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ರೈತರು ಗುರುವಾರ ಸೆಸ್ಕ್ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಚಾಮುಂಡೇಶ್ವರೀ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಹೊನ್ನೇಗೌಡನ ಹಳ್ಳಿಯು (ಕೈಲಾಸ ಭೂಮಿ) 1835ರಿಂದ ಜಾರಿಯಲ್ಲಿದ್ದು, ಸುಮಾರು 300 ಎಕರೆ ಉಳುಮೆ ಪ್ರದೇಶವನ್ನು ಹೊಂದಿದೆ. ಕೆಲವು ರೈತರು ಸ್ವಂತ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದಾರೆ. 6 ಮಂದಿ ರೈತರು ಮಾತ್ರ ಸೋಲಾರ್ ಸಹಾಯದಿಂದ ವ್ಯವಸಾಯ ಮಾಡುತ್ತಿದ್ದಾರೆ. ವಿದ್ಯುತ್ ಇಲ್ಲದ ಪರಿಣಾಮ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆದ ಫಸಲು ಹಾನಿಯಾಗುತ್ತಿದೆ. ಇದರಿಂದ ರೈತರು ಜೀವನ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯ ಸಹಕಾರ ಪಡೆದು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ವಿಭಾಗದ ಲೆಕ್ಕಾಧಿಕಾರಿ ಭಾಸ್ಕರ್ ಮಾತನಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು. ಪುಟ್ಟರಾಜು ಎಂಬುವರು ಮಾತನಾಡಿ, ಹರದನಹಳ್ಳಿ ಉಪ ವಿಭಾಗಕ್ಕೆ ಹೆಚ್ಚುವರಿ ಲೈನ್‌ಮೆನ್‌ಗಳ ಅವಶ್ಯಕತೆ ಇದ್ದು ನೇಮಕ ಮಾಡಿಕೊಡುವಂತೆ ತಿಳಿಸಿದರು.

ಸಿದ್ದಯ್ಯನಪುರ ಗ್ರಾಮದ ವ್ಯಾಪ್ತಿಯಲ್ಲಿರುವ ಅನಧಿಕೃತ ಪಂಪ್‌ಸೆಟ್‌ಗಳಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು, ಇವುಗಳನ್ನು ಪತ್ತೆ ಮಾಡಿ, ಕಡಿತಗೊಳಿಸಬೇಕು ಎಂದು ರಮೇಶ್ ಒತ್ತಾಯಿಸಿದರು. ಬಿಸಲವಾಡಿ ಗ್ರಾಮದ ರೈತ ವಿಜಯಕುಮಾರ್ ಮಾತನಾಡಿ, ಸೋಲರ್ ಪಂಪ್‌ಸೆಟ್ ಅಳವಡಿಕೆಗಾಗಿ ಸೌರ ವಿದ್ಯುತ್ ಕಲ್ಪಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದು, ಶೀಘ್ರ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ದೃಪದ್, ಕಂದಾಯ ಅಧಿಕಾರಿ ಮಹದೇವಸ್ವಾಮಿ, ಸಹಾಯಕ ಇಂಜಿನಿಯರ್ ವಸಂತ್ ಕುಮಾರ್, ನವೀನ್, ಸತೀಶ್, ರೀತೇಶ್, ಮಹದೇವಸ್ವಾಮಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net