

ಗುಂಡ್ಲುಪೇಟೆ: ಜನರು ಯೋಗಾಭ್ಯಾಸವನ್ನು ದೈನಂದಿನ ಕೆಲಸದಂತೆ ಅಳವಡಿಸಿಕೊಂಡರೆ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸಿ ರೋಗಗಳಿಂದ ದೂರವಿರಲು ಸಹಕಾರಿಯಾಗುತ್ತದೆ ಎಂದು ಬಂಡೀಪುರ ಉಪ ವಿಭಾಗದ ಎಸಿಎಫ್ ನವೀನ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯುಷ್ ಇಲಾಖೆ ವತಿಯಿಂದ ಗುರುವಾರ ಬಂಡೀಪುರದಲ್ಲಿ ಆಯೋಜಿಸಿದ್ದ ಯೋಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ವಿಶ್ವದಲ್ಲಿ ಯೋಗ ಕಲಿಸುವುದು ಬಹುಕೋಟಿ ರೂಪಾಯಿಗಳ ವ್ಯವಹಾರವಾಗಿದ್ದು, ಭಾರತೀಯರಿಗಿಂತ ವಿದೇಶೀಯರೇ ಹೆಚ್ಚಾಗಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡಗಳಿಗೆ ಒಳಗಾಗುತ್ತಿದ್ದು ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿರುವುದರಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೂ ಯೋಗಾಭ್ಯಾಸದ ಅಳವಡಿಕೆಯಿಂದ ಆರೋಗ್ಯಕರ ಪರಿಹಾರ ಕಂಡುಕೊಳ್ಳಬಹುದು. ಆದ್ದರಿಂದ ಎಲ್ಲ ವಯಸ್ಸಿನವರು ಯೋಗ ಚಟುವಟಿಕೆಯಲ್ಲಿ ಭಾಗವಹಿಸಬೇಕು ಹಾಗೂ ಅದನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವುದು ಸಹ ಉತ್ತಮ ಎಂದರು.
ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗುರುಪ್ರಸಾದ್ ಮಾತನಾಡಿ, ವಿಶ್ವದಲ್ಲಿ ಶಾಂತಿ, ಆರೋಗ್ಯ ಮತ್ತು ಸಹಭಾಗಿತ್ವ ಸಾಧಿಸಲು ಯೋಗದಿಂದ ಸಾಧ್ಯ ಎಂಬುದನ್ನು ಮನಗಂಡ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದು, ಪ್ರತಿ ವರ್ಷವೂ ಹೊಸ ರೂಪ ಪಡೆದುಕೊಳ್ಳುತ್ತಿದೆ. ಪ್ರತಿ ಆಸನದಲ್ಲಿಯೂ ರಕ್ತ ಪರಿಚಲನೆ, ಎಲ್ಲ ಸ್ನಾಯುಗಳು ಮತ್ತು ಕೀಲುಗಳಿಗೆ ಶಕ್ತಿ ದೊರಕುವುದರಿಂದ ಪ್ರತಿಯೊಬ್ಬರಿಗೂ ಅಗತ್ಯವಾದ ವ್ಯಾಯಾಮ ದೊರಕುತ್ತದೆ. ನಮ್ಮ ಆಧುನಿಕ ಜೀವನಶೈಲಿ ಮತ್ತು ವೃತ್ತಿ ಬದುಕಿನ ಒತ್ತಡಗಳಿಂದಾಗಿ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಹೃದಯದ ಸಮಸ್ಯೆಗಳು, ಕ್ಯಾನ್ಸರ್, ಬೊಜ್ಜು ಮುಂತಾದ ಕಾಯಿಲೆಗಳು ಮನುಷ್ಯನನ್ನು ಕಾಡುತ್ತಿವೆ. ಇದಕ್ಕೆ ಯೋಗ ಅಭ್ಯಾಸ ಸಹಕಾರಿ ಆಗಲಿದೆ ಎಂದರು. ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ಉಸಿರಾಟದ ಅಭ್ಯಾಸಗಳಾದ ಪ್ರಾಣಾಯಾಮ, ಭಸ್ತ್ರಿಕಾ, ಭ್ರಮರಿ ಮುಂತಾದ ನಾನಾ ಆಸನಗಳ ಪ್ರದರ್ಶನ ಮಾಡಿಸಿದರು.
ಬಂಡೀಪುರ ವಲಯದ ಆರ್‌ಎಫ್‌ಒ ದೀಪಾ, ಕುಂದಕೆರೆ ವಲಯದ ಎನ್.ಪಿ.ನವೀನ್‌ಕುಮಾರ್, ಮದ್ದಾನೇಶ್ವರ ಯೋಗ ಕೇಂದ್ರದ ಯೋಗ ಶಿಕ್ಷಕರಾದ ಕೆ.ಸಿ.ರಾಜಪ್ಪ, ವೀರನಪುರ ಬಸವಣ್ಣ, ನಾಗೇಶ್, ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ಕೆ.ಎಸ್.ರಾಜಶೇಖರಪ್ಪ, ಗಿರೀಶ್, ಸಿದ್ದರಾಜು,ವೈದ್ಯೆ ಡಾ.ನಿಶ್ಚಲಾ, ನಮ್ಮ ಗುಂಡ್ಲುಪೇಟೆ ತಂಡದ ತಾರಾ ನಾಗೇಂದ್ರ, ಪರಶಿವಮೂರ್ತಿ, ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.