

ಚಾಮರಾಜನಗರ : ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಪರಭಾರೆಯಾಗಿರುವುದು ನಿಜ. ಆದರೆ, ಈ ಪ್ರಕರಣದಲ್ಲಿ ಸಂಘದ ಅಧ್ಯಕ್ಷರ ಪಾತ್ರವಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಸ್ಪಷ್ಟಪಡಿಸಿದರು.
ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘ ಆಸ್ತಿ ಸಂರಕ್ಷಣಾ ಸಮಿತಿಯ ಕೆಲವು ಮುಖಂಡರು, ಆಸ್ತಿ ರಕ್ಷಣೆ ನೆಪದಲ್ಲಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಅವರನ್ನು ತೇಜೊವಧೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಈ ಸಮಿತಿಯ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ. ಇವರ ಹೆಸರನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇವೆ. ಇವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿಪಡಿಸುವ ಮತ್ತು ಸಮಾಜವನ್ನು ಸಂಘಟನೆಯ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಆದಿಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಸರ್ಕಾರ 1984ರಲ್ಲಿ ಆಸ್ತಿ ಖರೀದಿ ಮಾಡಿಕೊಟ್ಟಿತ್ತು. ಅಲ್ಲಿಂದ ಸಂಘವನ್ನು ಮುನ್ನಡೆಸಿಕೊಂಡು ಬಂದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸರಿಯಾದ ರೀತಿಯಲ್ಲಿ ಆಸ್ತಿ ದಾಖಲೆಗಳನ್ನು ಸಂರಕ್ಷಣೆ ಮಾಡಲು ವಿಫಲವಾದ ಕಾರಣ ಖಾತೆ ವರ್ಗಾವಣೆ ಆಗಿಲ್ಲ. ಹೀಗಾಗಿ ಅಸ್ತಿ ಪರಭಾರೆ ಮಾಡಿರುವ ಮೂಲ ಮಾಲೀಕರ ಹೆಸರಿನಲ್ಲಿಯೇ ಆರ್‌ಟಿಸಿ ಇದೆ. ಇದನ್ನು ರದ್ದುಪಡಿಸಲು, ಇ ಸ್ವತ್ತು ಮಾಡಿಸಲು ಮೂಲ ದಾಖಲಾತಿ ಇಲ್ಲದಾಗಿದೆ. ಆದರೆ ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯರು ಈ ದಿಕ್ಕಿನಲ್ಲಿ ಹೋಗಬೇಕೇ ಹೊರತು, ಸಮಾಜವನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು ಎಂದರು.
ಸಮಾಜದ ಆಸ್ತಿಯನ್ನು ರಕ್ಷಣೆ ಮಾಡಿ ಸಂಘವನ್ನು ಸುಸೂತ್ರವಾಗಿ ಮುನ್ನಡೆಯುವಂತೆ ಮಾಡಲು ಸಮಾಜದ ಹಿರಿಯರು, ಯಜಮಾನರು, ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸಿ ಎರಡು ಕಡೆಯವರನ್ನು ಸೇರಿಸಿ, ಎಲ್ಲರ ಮುಂದೆ ಕೂಲಂಕಷ ಚರ್ಚೆ ಮಾಡಿ, ಆಸ್ತಿ ರಕ್ಷಣೆ ಮತ್ತು ಸಮಾಜವನ್ನು ಒಗ್ಗಟ್ಟಿನಿಂದ ತೆಗೆದುಕೊಂಡ ಹೋಗಲು ಶ್ರಮ ವಹಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಬಸವರಾಜು, ಪುಟ್ಟಸ್ವಾಮಿ, ಮುಖಂಡ ಎಸ್.ಪಿ.ಮಹೇಶ್, ಪ್ರಸನ್ನಕುಮಾರ್, ಗಣೇಶಪ್ರಸಾದ್, ಜಯಶಂಕರ್ ಹಾಜರಿದ್ದರು.