

ಚಾಮರಾಜನಗರ:ಜಿಲ್ಲೆಯ ನ್ಯಾಯಾಲಯಗಳಲ್ಲಿ ಜು.8 ರಂದು ಆಯೋಜಿಸಿದ್ದ ಮೆಗಾ ಲೋಕ್ ಅದಾಲತ್‌ನಲ್ಲಿ 2744 ಕ್ರಿಮಿನಲ್ ಪ್ರಕರಣ ಸೇರಿದಂತೆ, ಒಟ್ಟು 14837 ಪ್ರಕರಣಗಳನ್ನು ಒಂದೇ ದಿನದಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣ, ಎಲ್ಲಾ ರೀತಿಯ ಸಿವಿಲ್ ಹಾಗೂ ಇನ್ನಿತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳಲು ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಚಾಮರಾಜನಗರ ತಾಲೂಕಿನ ನ್ಯಾಯಾಲಯದ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ 5587, ಯಳಂದೂರು 880, ಕೊಳ್ಳೇಗಾಲ 5616 ಹಾಗೂ ಗುಂಡ್ಲುಪೇಟೆಯಲ್ಲಿ 2754, ಒಟ್ಟಾರೆ 14837 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು. ಈ ಎಲ್ಲಾ ಪ್ರಕರಣದಿಂದ ಒಟ್ಟು 11,55,84,621 ರೂ. ಹಣವನ್ನು ಚುಕ್ತಾ ಮಾಡಲಾಗಿದೆ ಎಂದು ಬುಧವಾರ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಟ್ಟು 14009 ವ್ಯಾಜ್ಯ ಪೂರ್ವ ಪ್ರಕರಣಗಳ ಇತ್ಯರ್ಥಗೊಳಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಅದರಲ್ಲಿ 11888 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, 2,87,41,601 ರೂ. ಹಣವನ್ನು ದಂಡದ ರೂಪದಲ್ಲಿ ಚುಕ್ತಾಮಾಡಲಾಗಿದೆ. ವಿಶೇಷವಾಗಿ ಈ ಬಾರಿಯ ಲೋಕ್‌ಅದಾಲತ್‌ನಲ್ಲಿ 205 ಸಿವಿಲ್ ಪ್ರಕರಣ ಹಾಗೂ 2744 ಕ್ರಿಮಿನಲ್ ಪ್ರಕರಣಗಳನ್ನು ರಾಜಿಗೊಳಿಸಲಾಗಿದ್ದು, ಇದರಿಂದ 8,68,43,020 ರೂ. ಹಣವನ್ನು ಚುಕ್ತಾಗೊಳಿಸಲಾಗಿದೆ. ಈ ಬಾರಿಯ ಲೋಕ್ ಅದಾಲತ್‌ನಲ್ಲಿ 13000 ಒಟ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ಇಟ್ಟುಕೊಳ್ಳಲಾಗಿತ್ತು, ಆದರೆ ದಾಖಲೆ ಎಂಬಂತೆ 14837 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗಿರುವುದಲ್ಲದೇ, ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಲೋಕ್ ಅದಾಲತ್ ಮೂಲಕ ಇಷ್ಟೊಂದು ದಾಖಲೆಯ ಪ್ರಕರಣಗಳು ಇತ್ಯರ್ಥವಾಗಲು ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ಶ್ರಮ ಕಾರಣವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್‌ರವರ ಅವಿರತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ವಕೀಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಹಾಜರಿದ್ದರು.