ನಾಡಿನಾದ್ಯಂತ ಬೆಳಕು ಚೆಲ್ಲಿದ ‘ರಂಗದೀವಿಗೆ’

19rajesh4
Published on

ಮಣಿಕಂಠ ಆಲೂರು ಚಾಮರಾಜನಗರ
ಕಲೆ, ಸಾಹಿತ್ಯ, ಜಾನಪದ, ಸಂಗೀತ, ರಂಗಭೂಮಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಏಳು ವರ್ಷಗಳ ಹಿಂದೆ ಸ್ಥಾಪನೆಯಾದ ರಂಗದಿವೀಗೆ ಸಂಸ್ಥೆ ಮೂಲಕ ನಿರಂತರ ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತಿವೆ.

ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಎಂ.ಮಹದೇವಯ್ಯ ಮತ್ತು ನಾಗಮ್ಮ ದಂಪತಿ ಪುತ್ರ ನಟರಾಜ್ ಅವರು ಓದಿನ ನಡುವೆಯೇ ಕಲೆಯ ಗೀಳನ್ನು ಹಚ್ಚಿಕೊಂಡವರು. ಹಾಡು, ಅಭಿನಯ, ಚಿತ್ರಕಲೆಯನ್ನು ಕರಗತ ಮಾಡಿಕೊಂಡ ಅವರು, ನಿರಂತರ ಕಲಾಸೇವೆ ಮಾಡುವ ಉದ್ದೇಶದಿಂದ 2019ರಲ್ಲಿ ‘ರಂಗ ದೀವಿಗೆ ಕಲೆ, ಸಾಹಿತ್ಯ, ಜಾನಪದ, ಸಂಗೀತ, ರಂಗಭೂಮಿ ಮತ್ತು ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಸಂಸ್ಥೆ’ಯನ್ನು ಪ್ರಾರಂಭಿಸಿದರು.

ಈ ಸಂಸ್ಥೆಯ ಮೂಲಕ ಮೈಸೂರು ಗುರುರಾಜ್ ಅವರ ಸಹಕಾರದಿಂದ ಜಾನಪದ ಕಥಾ ಗಾಯನ ಕಾರ್ಯಕ್ರಮ, ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ, ಮಕ್ಕಳ ಬೇಸಿಗೆ ಶಿಬಿರಗಳನ್ನು ಆಯೋಜನೆ ಮಾಡಿಕೊಂಡು ಬಂದಿದ್ದಾರೆ. ಪುಣ್ಯಕೋಟಿ ಸಂಸ್ಥೆಯ ಸಹಯೋಗದೊಂದಿಗೆ ಮಹಿಳೆಯರಿಗೆ ಒಂದು ತಿಂಗಳು ಹೊಲಿಗೆ ತರಬೇತಿ ಕಾರ್ಯಾಗಾರ, ಸಹಸ್ರಾರು ಬೀದಿ ನಾಟಕಗಳ ಪ್ರದರ್ಶನ, ಬೀದಿ ನಾಟಕ ತರಬೇತಿ ಕಾರ್ಯಾಗಾರ, ನೂರಾರು ಜನಪದ ಗೀತೆ ಗಾಯನ, ಸುಗಮ ಸಂಗೀತ ಗಾಯನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಡುತ್ತಿದ್ದಾರೆ. ಈ ಮೂಲಕ ಕಲಾಸೇವೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ನಟರಾಜ್ ಅವರು ಕಲೆ ನಟರಾಜ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಮಾತೃಸಂಸ್ಥೆ ರಂಗತರಂಗದ ಅಧ್ಯಕ್ಷ ಬಿಸಲವಾಡಿ ಸೋಮಶೇಖರ್ ಹಾಗೂ ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಕಲೆ ನಟರಾಜ್, ಪ್ರಸ್ತುತ ಪುಣ್ಯ ಸ್ವಯಂಸೇವಾ ಸಂಸ್ಥೆಯಲ್ಲೂ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ, ಜಿಲ್ಲಾಡಳಿತ ಹಾಗೂ ನೂರಾರು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೃಹ ರಕ್ಷಕದಳದಲ್ಲೂ ಕೆಲಸ ಮಾಡಿರುವ ನಟರಾಜ್ ಬಾಲವಿಕಾಸ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕಾರ್ಯದರ್ಶಿಯೂ ಆಗಿದ್ದಾರೆ.

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ಧ ನೂರಾರು ಬೀದಿ ನಾಟಕಗಳನ್ನು ಸ್ವತಃ ರಚಿಸಿ ನಿರ್ದೇಶನ ಮಾಡಿದ್ದಾರೆ. ಆ ನಾಟಕಗಳಿಗೆ ಹಾಡುಗಳನ್ನು ಬರೆದು, ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ನುಡಿಮಲ್ಲಿಗೆ ಎನ್ನುವ ಧ್ವನಿಸುರುಳಿಯಲ್ಲಿ ಧ್ವನಿಯಾಗಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿವೆ. ಹಿರಿಯ ರಂಗಕರ್ಮಿ ಮಿಮಿಕ್ರಿ ಮಲ್ಲಣ್ಣ, ರಿದಮ್ ರಾಮಣ್ಣ, ಎಚ್.ಎಸ್.ಸುಜಾತಾ, ಶಿವಶಂಕರ್ ಚಟ್ಟು, ಸುರೇಶ್ ಕೋಳಿಪಾಳ್ಯ, ಸುಮತಿ, ಸುಮಿತ್ರಾ ಇನ್ನಿತರ ಕಲಾವಿದರು ರಂಗದೀವಿಗೆ ಸಂಸ್ಥೆಯ ಏಳ್ಗೆಗೆ ಜತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರಂಗದೀವಿಗೆ ಮೂಲಕ ಜಾನಪದ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಮಕ್ಕಳ ಹಕ್ಕುಗಳ ಕಾರ್ಯಕ್ರಮ ರೂಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಎನ್ನುವ ಉದ್ದೇಶದಿಂದ ಮಲ್ಲಯ್ಯನಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಪರಿಕರ ವಿತರಣೆ, ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ರಂಗಭೂಮಿಯಲ್ಲೂ ಚತುರ:
ಯುವ ರಂಗಕರ್ಮಿ ಕಿರಣ್ ಗಿರ್ಗಿ ನಿರ್ದೇಶನದ ಜೋಕುಮಾರಸ್ವಾಮಿ, ಕಂಡಾಯದ ಕೋಳಿ ನಾಟಕಗಳು, ಎಚ್.ಎಸ್.ಉಮೇಶ್ ನಿರ್ದೇಶನದ ತುಘಲಕ್, ಮಹಿಮಾಪುರ ಮತ್ತು ಇತಿಹಾಸ ಚಕ್ರ ನಾಟಕಗಳು. ನಾಗೇಶ್ ಸೋಸ್ಲೆ ನಿರ್ದೇಶನದಲ್ಲಿ ಮೂಡಿಬಂದಿದ್ದ ಯೇಸುವಿನ ಕೊನೆ ದಿನಗಳು, ಸೋಮಶೇಖರ್ ಬಿಸಲವಾಡಿ ನಿರ್ದೇಶನದ ಸಂಕ್ರಾಂತಿ ಮತ್ತು ಏಕಲವ್ಯ ನಾಟಕಗಳಲ್ಲಿ ಕಲೆ ನಟರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ರಂಗಭೂಮಿಯಲ್ಲೂ ತನ್ನದೇ ಆದ ಛಾಪುಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಂಗ ದೀವಿಗೆ ಸಂಸ್ಥೆಯ ವತಿಯಿಂದ ಬುದ್ಧನ ಜೀವನಸಾರ ಕುರಿತಾದ ಒಂದು ನಾಟಕ ಹಾಗೂ ಸಾಹಿತಿ ಮುಳ್ಳೂರು ನಾಗರಾಜ್ ರಚನೆಯ ‘ಕತ್ತಲು’ ನಾಟಕವನ್ನು ಪ್ರದರ್ಶಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಸಹಸ್ರಾರು ಬೀದಿ ನಾಟಕಗಳು:
ಜಿಲ್ಲಾ ಪಂಚಾಯಿತಿ ಸಹಯೋಗದ ಸ್ವೀಪ್ ಕಾರ್ಯಕ್ರಮ, ಶೌಚಗೃಹ ನಿರ್ಮಾಣ ಜಾಗೃತಿ, ಕೃಷಿ ಇಲಾಖೆಯ ಜಲಾನಯನ ಜಾಗೃತಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಾಲಕಾರ್ಮಿಕ ಮತ್ತು ಮಕ್ಕಳ ಹಕ್ಕುಗಳು, ನಗರಸಭೆಯ ಜಾಗೃತಿ ಕಾರ್ಯಕ್ರಮಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ರಂಗದೀವಿಗೆ ಸಂಸ್ಥೆಯ ವತಿಯಿಂದ ಸಹಸ್ರಾರು ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಜಿಲ್ಲೆಯಲ್ಲದೇ ಮಂಡ್ಯ, ಮೈಸೂರು ಹಾಗೂ ಇನ್ನಿತರ ಹೊರ ಜಿಲ್ಲೆಗಳಲ್ಲೂ ಬೀದಿ ನಾಟಕಗಳನ್ನು ಮಾಡಿದ್ದಾರೆ. ಸ್ವತಃ ಕಲಾವಿದನಾಗಿ ಬೀದಿನಾಟಕಗಳಲ್ಲಿ ಅಭಿನಯಿಸಿರುವ ಕಲೆ ನಟರಾಜ್ ಕವಿಯಾಗಿಯೂ ಗುರುತಿಸಿಕೊಂಡಿದ್ದು, ಮೈಸೂರು ದಸರಾ ಕವಿಗೋಷ್ಠಿ ಹಾಗೂ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆ ವಾಚಿಸಿದ್ದಾರೆ.

ಚಿತ್ರಕಲೆ, ಸಿನಿಮಾದಲ್ಲೂ ಛಾಪು
ಶಿಕ್ಷಣದ ಜತೆಗೆ ಸೌಮ್ಯ ಆರ್ಟ್ಸ್‌ನಲ್ಲಿ ಚಿತ್ರಕಲಾ ತರಬೇತಿ ಪಡೆದುಕೊಂಡ ನಟರಾಜ್ ಅವರು ಚಿತ್ರಕಲೆಯನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್, ಭಗೀರಥ, ಕನಕದಾಸ ಹಾಗೂ ಇನ್ನಿತರೆ ಮಹಾನಾಯಕರ ಕಟೌಟ್‌ಗಳನ್ನು ಬರೆದಿದ್ದಾರೆ. ರಂಗಭೂಮಿ ಜತೆಗೆ ಸಿನಿಮಾಗಳಲ್ಲೂ ಅಭಿನಯಿಸಿರುವ ನಟರಾಜ್ ಪ್ರವೀಣ್ ಕೃಪಾಕರ್ ನಿರ್ದೇಶನ ಹಾಗೂ ಸಂಚಾರಿ ವಿಜಯ್ ನಾಯಕರಾಗಿ ಅಭಿನಯಿಸಿದ್ದ ತಲೆದಂಡ ಸಿನಿಮಾದಲ್ಲಿ ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದರು. ಇತ್ತೀಚೆಗೆ ತೆರೆಕಂಡ ಚಿರತೆ ಬಂತು ಚಿರತೆ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ನಿರಂತರ ಕಲಾಸೇವೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಹಲವು ಪ್ರಶಸ್ತಿ-ಪುರಸ್ಕಾರ:
ಕಲೆ ನಟರಾಜ್ ಅವರ ನಿರಂತರ ಕಲಾ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರಿಗೆ ಹಲವಾರು ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡಪರ ಸಂಘಟನೆಯಿಂದ ಕನ್ನಡಶ್ರೀ, ಕದಂಬ ಕನ್ನಡ ಸೇನೆ ವತಿಯಿಂದ ಕಲಾಶ್ರೀ, ನಂಜನಗೂಡಿನ ಇಂಪು ಇಂಚರ ಸಂಸ್ಥೆ ವತಿಯಿಂದ ರಂಗಚತುರ ಪ್ರಶಸ್ತಿ, ನೆಹರು ಯುವಕೇಂದ್ರ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಯುವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದಲ್ಲದೇ ಮತ್ತಷ್ಟು ಸಂಘ ಸಂಸ್ಥೆಗಳು ನೂರಾರು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ನಟರಾಜ್ ಅವರ ಕಲಾ ಸೇವೆಯನ್ನು ಗೌರವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net