

ಚಾಮರಾಜನಗರ: ಇಂಧನ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಸೇನಾಪಡೆಯಿಂದ ನಗರದಲ್ಲಿ ಬುಧವಾರ ತಮಟೆ ಚಳವಳಿ ನಡೆಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ತಮಟೆ ಬಾರಿಸಿ, ವಿವಿಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಾಹನಸಂಚಾರ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು. ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ರಾಜ್ಯ ಸರ್ಕಾರ ಒಂದು ಕಡೆ ಜನತೆಗೆ ಉಚಿತ ಯೋಜನೆಗಳನ್ನು ನೀಡಿ, ಮತ್ತೊಂದು ಕಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿರುವುದು ನಾಚಿಕೇಡಿನ ಸಂಗತಿ. ರಾಜ್ಯ ಸರ್ಕಾರ ಕೂಡಲೇ ಏರಿಕೆ ಮಾಡಿರುವ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜ್, ಮಹೇಶಗೌಡ, ಗು.ಪುರುಷೋತ್ತಮ್, ಚಾ.ವೆಂ.ರಾಜ್ ಗೋಪಾಲ್,ನಾಗೇಂದ್ರಗೌಡ, ಅರುಣ್ ಕುಮಾರ್ ಗೌಡ, ಮಂಜು, ಲೋಕೇಶ್, ಭೂಪತಿ, ತಾಂಡವಮೂರ್ತಿ, ಆಟೋ ಲಿಂಗರಾಜು, ವೀರಭದ್ರ, ಪ್ರಕಾಶ್, ಸಾಗರ್ ರಾವತ್ ಇತರರು ಭಾಗವಹಿಸಿದ್ದರು.