ದರ್ಶನ್ ವಿರುದ್ಧ ಸಿಡಿದೆದ್ದ ಮಹಾಸಭಾ

18rajesh4
Published on

ಚಾಮರಾಜನಗರ: ಚಿತ್ರದುರ್ಗದ ವೀರಶೈವ ಲಿಂಗಾಯತ ಸಮಾಜದ ರೇಣುಕಸ್ವಾಮಿ ಹತ್ಯೆ ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ-ಲಿಂಗಾಯತ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರವೆ ಮಠದ ಶ್ರೀಸರ್ಪ ಭೂಷಣಸ್ವಾಮೀಜಿ, ಮರಿಯಾಲ ಮಠದ ಶ್ರೀಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ನಗರ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆ ಹೊರಟರು. ಶ್ರೀಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಧರಣಿ ನಡೆಸಿದರು.

ದರ್ಶನ್ ಮತ್ತು ಸಹಚರರಿಗೆ ಉಗ್ರ ಶಿಕ್ಷೆಯಾಗಲಿ, ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ದರ್ಶನ್‌ನನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ ಎಂಬ ಘೊಷಣೆ ಜತೆಗೆ ಕರ್ನಾಟಕ ಪೊಲೀಸ್ ಇಲಾಖೆಗೆ ಜೈಕಾರ ಕೂಗಿ, ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು. ದರ್ಶನ್ ನಟನೆಯ ಸಿನಿಮಾದ ಸಿಡಿಗಳನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಮುಖಾಂತರ ಸಿಎಂ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಉಗ್ರ ಶಿಕ್ಷೆಯಾಗಲಿ:
ರೇಣುಕಸ್ವಾಮಿ ಹತ್ಯೆ ಮಾಡಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ ಎಂದು ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಪ್ರಸಿದ್ಧ ನಟನಾಗಿ, ತನ್ನ ಗ್ಯಾಂಗ್‌ನೊಂದಿಗೆ ಸೇರಿಕೊಂಡು ದರ್ಶನ್ ವಿಕೃತಿ ಮೆರೆದು ಕೊಲೆ ಮಾಡಿರುವುದು ಖಂಡನೀಯ. ಪೊಲೀಸರು ಕೊಲೆ ಭೇದಿಸಿ ಯಾವುದೇ ಒತ್ತಡಕ್ಕೂ ಮಣಿಯಾದೆ ದರ್ಶನ್ ಬಂಧಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ನೇಹಾ ಹತ್ಯೆಯಾಗಿತ್ತು. ಈಗ ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ನಟ ದರ್ಶನ್ ಮತ್ತು ಗ್ಯಾಂಗ್ ಅಮಾನುಷವಾಗಿ ಹತ್ಯೆ ಮಾಡಿದೆ. ಇವರಿಗೆ ಕಠಿಣ ಶಿಕ್ಷೆಯಾಗಬೇಕು ಒತ್ತಾಯಿಸಿದರು.

ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೋಗಾಪುರ ನಾಗೇಂದ್ರ, ಮುಖಂಡ ಆಲೂರು ಮಲ್ಲು, ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್‌ರಿಎಚ್ ಮಹದೇವಸ್ವಾಮಿ, ಮಹಾಸಭಾದ ತಾಲೂಕು ಅಧ್ಯಕ್ಷರಾದ ಚಾಮರಾಜನಗರ ನಟೇಶ್, ಹಂಗಳ ನಂಜಪ್ಪ, ಕೊಳ್ಳೇಗಾಲದ ಮಹದೇವಪ್ರಸಾದ್, ಬಿ.ಕೆ.ರವಿಕುಮಾರ್, ಮೂಡ್ಲುಪುರ ಮಂಜೇಶ್, ಆರ್.ಎಸ್.ಲಿಂಗರಾಜು, ಮಹದೇವಸ್ವಾಮಿ, ನೌಕರರ ಸಂಘದ ಮಾಜಿ ಅಧ್ಯಕ್ಷ ಡಾ.ಪರಮೇಶ್ವರಪ್ಪ, ವಸಂತಮ್ಮ, ರತ್ನಮ್ಮ ಬಸವರಾಜು, ನಟರಾಜು, ಮನೋಜ್ ಪಟೇಲ್, ಗುರುಸ್ವಾಮಿ, ಮಹೇಶ್ ಪಟೇಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net