ವೈದ್ಯಾಧಿಕಾರಿ ವರ್ಗಾವಣೆಗೆ ಒತ್ತಾಯ

18rajesh2
Published on

ಚಾಮರಾಜನಗರ: ತಾಲೂಕಿನ ಉಡಿಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮಾರಾಣಿ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ್‌ಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಮಂಗಳವಾರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಿಎಚ್‌ಒ ಕಚೇರಿಯಲ್ಲಿ ಮನವಿ ಸಲ್ಲಿಸಿದ ರೈತರು, ಡಾ.ಉಮಾದೇವಿ ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕೆಂದು ಕೋರಿದರು. ಉಡಿಗಾಲ ಆಸ್ಪತ್ರೆಯಲ್ಲಿ ಕೆಲವು ವರ್ಷಗಳ ಹಿಂದೆ ಡಾ.ಉಮಾರಾಣಿ ರೋಗಿಗಳಿಗೆ ಅವಧಿ ಮೀರಿದ್ದ ಔಷಧ ನೀಡಿದ್ದರು. ಇದರಿಂದ ಆನಾರೋಗ್ಯ ಪೀಡಿತನಾಗಿದ್ದ ಮಹದೇವಸ್ವಾಮಿ ಪ್ರಾಣ ಕಳೆದುಕೊಂಡ. ಮತ್ತೊಬ್ಬ ರೋಗಿ ಲೀಲಾವತಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಗ್ಯ ಇಲಾಖೆಗೂ ದೂರು ನೀಡಲಾಗಿತ್ತು. ಅದರಂತೆ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಉಡಿಗಾಲ ರಸ್ತೆಯಲ್ಲಿ ಅಘಪಾತಗಳು ಸಂಭವಿಸಿದಾಗ ರೋಗಿಗಳು ಬಂದರೆ ಚಿಕಿತ್ಸೆಗೆ ಅಗತ್ಯವಿರುವ ಔಷಧ ದೊರೆಯುತ್ತಿಲ್ಲ. ಆಸ್ಪತ್ರೆಯಲ್ಲಿ ನೌಕರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮಧ್ಯಾಹ್ನ 2 ಗಂಟೆ ಆಸ್ಪತ್ರೆ ಬಂದ್ ಆಗಿರುತ್ತದೆ. ರಾತ್ರಿ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ಒಂದು ತಿಂಗಳ ಒಳಗೆ ಈ ಸಂಬಂಧ ಕ್ರಮ ಕೈಗೊಳ್ಳದಿದ್ದರೆ ಡಿಎಚ್‌ಒ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಉಪಾಧ್ಯಕ್ಷ ಪಟೇಲ್‌ಶಿವಮೂರ್ತಿ, ಕಾರ್ಯದರ್ಶಿ ಎಚ್.ಮೂಕಳ್ಳಿ ಮಹದೇವಸ್ವಾಮಿ, ಮೈಸೂರು ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ನಂಜೇದೇವನಪುರದ ಸತೀಶ್, ಉಪಾಧ್ಯಕ್ಷ ಶಿವಸ್ವಾಮಿ, ಕಾರ್ಯದರ್ಶಿ ಉಡಿಗಾಲ ಸುಂದ್ರಪ್ಪ, ಹಿರಿಯೂರು ಮಹೇಶ್, ಮಾದೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net