

ಚಾಮರಾಜನಗರ; ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆಗಳು ಮತ್ತು ಚಿಂತನೆಗಳು ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಎಸ್ಸಿ, ಎಸ್ಟಿ ಪುರುಷರ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಹಾಗೂ ವಿದ್ಯಾರ್ಥಿ ನಿಲಯದ 33ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ನೆಲದಲ್ಲಿ ಜನಿಸಿದ ಭಗವಾನ್ ಬುದ್ಧ, ಬಸವೇಶ್ವರ, ಡಾ.ಬಿ.ಆರ್.ಅಂಬೇಡ್ಕರ್ ಬದುಕು, ತತ್ವ-ಸಿದ್ಧಾಂತ ಭವ್ಯ ಭಾರತ ನಿರ್ಮಾಣಕ್ಕೆ ಬುನಾದಿಯಾಗಿದೆ. ಅಂಬೇಡ್ಕರ್ ಅವರು ಅನುಭವಿಸಿದ ನೋವು, ಅವಮಾನಗಳನ್ನು ಮತ್ತೊಬ್ಬ ವ್ಯಕ್ತಿ ಅನುಭವಿಸಿ ಅಂತಹ ಸಾಧನೆ ಮಾಡಲು ಸಾಧ್ಯವಿಲ್ಲ. ಅದೆಲ್ಲವನ್ನು ಮೆಟ್ಟಿ ನಿಂತು ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದರು ಎಂದರು.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಂವಿಧಾನವೊಂದೇ ಕಾರಣವಾಗಿದೆ. ಆ ಸಂವಿಧಾನದ ಮೂಲಕ ದೊರೆಯುವ ಹಕ್ಕು, ಅಧಿಕಾರವನ್ನು ಪಡೆಯಲು ಪ್ರತಿಯೊಬ್ಬರಿಗೂ ಸಮಾನ ಅವಕಾಶವಿದೆ. ವಿದ್ಯಾರ್ಥಿಗಳು ಈ ದೆಸೆಯಲ್ಲಿ ಸಾಗಿ ಅಂಬೇಡ್ಕರ್ ಆಶಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಮಾತನಾಡಿ, ದೇಶದಲ್ಲಿರುವ ದಮನಿತ ಮತ್ತು ಅಸ್ಪೃಶ್ಯ ಸಮಾಜದ ಪರವಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಟ ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ತಮ್ಮನ್ನು ಜರಿದಂತಹ ಮೇಲ್ವರ್ಗದ ಜನರ ಮನೆಯನ್ನು ಬೆಳಗುವಂತಹ ಕೆಲಸವನ್ನು ಅಂಬೇಡ್ಕರ್ ಮಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಅನುಭವಿಸುತ್ತಿರುವ ಹಕ್ಕು, ಅಧಿಕಾರಗಳು ಅಂಬೇಡ್ಕರ್ ಅವರು ತಮ್ಮ ಶ್ರಮದಿಂದ ಗಳಿಸಿಕೊಟ್ಟಿರುವುದಾಗಿದೆ ಎಂದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ನಿರ್ದೇಶಕ ಡಾ.ವಿ.ಜಿ.ಸಿದ್ದರಾಜು, ಶಿಕ್ಷಕ ಸಲಹೆಗಾರ ಆರ್.ಚೇತನ್, ಮೆಸ್ ಗುತ್ತಿಗೆದಾರರಾದ ಅಬ್ದುಲ್ ಅಜೀಜ್, ಕಾಗಲವಾಡಿ ಚಂದ್ರು, ಸಹಾಯಕ ನಿಲಯ ಪಾಲಕ ಕುಮಾರ್ ಚಿಕ್ಕಹೊಳೆ ಇತರರು ಉಪಸ್ಥಿತರಿದ್ದರು.