ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು

oppo_2
oppo_2
Published on

ಹನೂರು: ತಾಲೂಕು ಕೇಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮದ ಮುಸ್ಲಿಮರು ಸೋಮವಾರ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನವನ್ನು ನೆನೆಯುವ ಸಲುವಾಗಿ ಆಚರಿಸುವ ಈ ಬಕ್ರೀದ್ ಹಬ್ಬವನ್ನು ತಾಲೂಕಿನಲ್ಲಿ ಹೆಚ್ಚಾಗಿ ಮುಸ್ಲಿಮರು ವಾಸಿಸುವ ಮಂಗಲ, ಬಂಡಳ್ಳಿ, ಕೌದಳ್ಳಿ, ಕಣ್ಣೂರು, ಎಲ್ಲೇಮಾಳ, ಬಸಪ್ಪನದೊಡ್ಡಿ, ಅಜ್ಜೀಪುರ, ಚಿಗತಾಪುರ, ಕುರುಬರದೊಡ್ಡಿ, ಒಡೆಯರಪಾಳ್ಯ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಮುಸ್ಲಿಮರು ಬೆಳಗ್ಗೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಧರ್ಮಗುರುಗಳು ಇಸ್ಲಾಂ ಧರ್ಮ ಕುರಿತು ಉಪನ್ಯಾಸ ನೀಡಿದರು. ಬಳಿಕ ಪರಸ್ಪರ ಆಲಿಂಗಿಸಿಕೊಳ್ಳುವುದರ ಜತೆಗೆ ಹಸ್ತಲಾಘವ ನೀಡಿ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಪ್ರಾರ್ಥನೆ ಮುಗಿದ ಬಳಿಕ ತಮ್ಮ ತಮ್ಮ ಮನೆಗಳಿಗೆ ತೆರಳಿದ ಮುಸ್ಲಿಮರು, ಹಜರತ್ ಇಬ್ರಾಹಿಂ ಅಲಿ ಸಲಂ ಅವರ ಹೆಸರಿನಲ್ಲಿ ಬಂಧು, ಬಾಂಧವರಿಗೆ ದಾನ ಮಾಡಿ ಸಂಭ್ರಮಪಟ್ಟರು. ಹಬ್ಬದ ಹಿನ್ನೆಲೆ ಪುಟಾಣಿಗಳು ನವ ನವೀನ ಬಟ್ಟೆ ಧರಿಸಿ ಸಂಭ್ರಮಿಸಿದರು.

ಪಟ್ಟಣದಲ್ಲೂ ಆಚರಣೆ: ಪಟ್ಟಣದ ಮುಸ್ಲಿಮರು ಬೆಳಗ್ಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಸಮೀಪದ ಆರ್.ಎಸ್.ದೊಡ್ಡಿ ಬಳಿಯಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಬಳಿಕ ಈದ್ಗಾ ಮೈದಾನದಿಂದ ಮಲೆಮಹದೇಶ್ವರ ಬೆಟ್ಟ ಮುಖ್ಯರಸ್ತೆಯ ಮೂಲಕ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆಯಲ್ಲಿ ಮೆರವಣಿಗೆ ತೆರಳಿ ಘೋಷಣೆಗಳನ್ನು ಕೂಗಿ ಧರ್ಮ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಮುಸ್ಲಿಮರು ಇತರ ಧರ್ಮದವರಿಗೂ ಬಕ್ರೀದ್ ಹಬ್ಬದ ಶುಭಾಶಯವನ್ನು ಕೋರಿ ಔತಣಕ್ಕೆ ಆಹ್ವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net