

ಚಾಮರಾಜನಗರ: ದಲಿತ ಜನಪ್ರತಿನಿಧಿಗಳು ರಾಜಕೀಯೇತರವಾಗಿ ಹೋರಾಟ ಮಾಡುವ ಪ್ರಜ್ಞಾವಂತರ ಸಲಹೆ ಪಡೆದು ಅಂಬೇಡ್ಕರ್ ಆಶಯದಂತೆ ರಾಜ್ಯಾಧಿಕಾರ ಪಡೆಯಲಿ ಎಂದು ಸಾಹಿತಿ ಇರಸವಾಡಿ ಮಹೇಶ್ ಹೇಳಿದರು.
ನಗರದ ರಾಮಸಮುದ್ರ ಬಡಾವಣೆಯ ಚಿಕ್ಕ ಬೀದಿಯಲ್ಲಿ ಜೈ ಭೀಮ್ ಯುವಜನ ಸಂಘದ ವತಿಯಿಂದ ಆಯೋಜಿಸಿದ್ದ 133ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಮನುವಾದಿ ಪಕ್ಷಗಳೊಳಗೆ ರಾಜಕಾರಣ ಮಾಡುವ ದಲಿತ ಜನಪ್ರತಿನಿಧಿಗಳು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿಯೇ ಬಾಬಾಸಾಹೇಬರು ಸ್ವತಂತ್ರ ಪಕ್ಷ ಕಟ್ಟಿದ್ದರು. ಇಂದು ಅತೀ ಹಿಂದುಳಿದ ಜಾತಿಗಳೂ ಸಹ ಫ್ಯೂಡಲ್ ಮನಸ್ಥಿತಿಯನ್ನು ಹೊಂದಿವೆ. ದಲಿತ ರಾಜಕಾರಣಿಗಳ ದಮನಕ್ಕೆ ಮುಂದಾಗಿವೆ. ಅಂದು ದಲಿತ ನಾಯಕರಾದ ಬಸವಲಿಂಗಪ್ಪ, ಬಿ.ರಾಚಯ್ಯ, ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದವರೇ ಇಂದು ಮಲ್ಲಿಕಾರ್ಜುನ ಖರ್ಗೆ ಡಾ.ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಹುದ್ದೆ ವಂಚಿಸುತ್ತಿದ್ದಾರೆ ಎಂದರು.
ದಲಿತ ಜನಪ್ರತಿನಿಧಿಗಳು ರಾಜಕೀಯೇತರವಾಗಿ ಹೋರಾಟ ಮಾಡುವ ಪ್ರಜ್ಞಾವಂತರ ಸಲಹೆ ಪಡೆದು, ದಲಿತ ಸಮುದಾಯದ ಅಗತ್ಯತೆಗಳನ್ನು ಪೂರೈಸುವಲ್ಲಿ ಮುಂದಾಗಬೇಕು. ಇಲ್ಲದಿದ್ದರೇ ದಲಿತ ಸಮುದಾಯದ ರಾಜಕಾರಣಕ್ಕೆ ಯಾವ ಮೌಲ್ಯವೂ ಬರುವುದಿಲ್ಲ ಎಂದು ಹೇಳಿದರು.
ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಾಜು ಮಾತನಾಡಿ, ಒಂದು ಸಮುದಾಯದ ಶಿಸ್ತು ಆ ಸಮುದಾಯದ ಪ್ರಗತಿಯನ್ನು ಸೂಚಿಸುತ್ತದೆ. ಶಿಕ್ಷಣದಿಂದ ಸಮಾಜದ ಪ್ರಗತಿ ಎಂದು ತಿಳಿದಿದ್ದ ಬಾಬಾಸಾಹೇಬರು ಮೊದಲಿಗೆ ಎಲ್ಲರಿಗೂ ಶಿಕ್ಷಣ ಕೊಡಿಸಿದರು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜು ಕೋಡಿಉಗನೆ ಮಾತನಾಡಿ, ಬಾಬಾಸಾಹೇಬರು ಸಾಮಾಜಿಕ ಅನಿಷ್ಟ ತುಂಬಿರುವ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಜನರು ಮೌಢ್ಯವನ್ನು ತೊರೆದು ವೈಜ್ಞಾನಿಕ ಬದುಕಿನೆಡೆಗೆ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲ ಪುಟ್ಟಸ್ವಾಮಿ, ನಾಗಣ್ಣ, ಮುಖಂಡರಾದ ಬಸವರಾಜು, ಜಯಕುಮಾರ್, ಆರ್.ನಾಗಣ್ಣ, ವಾಸು ಹೊಂಡರಬಾಳು, ಬಾಬು ರಾಮಸಮುದ್ರ, ಅಕ್ಷಯ್ ಕುಮಾರ್, ಪವನ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.