

ಚಾಮರಾಜನಗರ: ತಾಲೂಕು ಆದಿಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಅಕ್ರಮ ಪರಭಾರೆ ಹಾಗೂ ಲೆಕ್ಕಪತ್ರಗಳಲ್ಲಿ ಲೋಪ ಮತ್ತು ಹಣ ದುರುಪಯೋಗ ಪ್ರಕರಣದಲ್ಲಿ ಸಂಘದ ನಿರ್ದೇಶಕ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಕಿಂಗ್‌ಪಿನ್ ಆಗಿದ್ದಾರೆ. ಸರ್ಕಾರ ಅದೇಶದ ವಿರುದ್ದ ನ್ಯಾಯಾಲಯದ ತಡೆಯಾಜ್ಞೆ ತರುವ ಮೂಲಕ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ಆದಿಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿಯ ಸದಸ್ಯ ಅಯ್ಯನಪುರ ಶಿವಕುಮಾರ್ ದೂರಿದರು.
ಅಕ್ರಮ ಆಸ್ತಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳಾದ ಸರಗೂರು ಇಶಾಕ್ ಷರೀಪ್, ಶ್ರೀರಂಗಪಟ್ಟಣದ ಶಿವಣ್ಣ, ಚಿಕ್ಕಂಕಹಳ್ಳಿಯ ರಮೇಶ್ ಅವರನ್ನು ಬಂಧಿಸಬೇಕು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ವಿರುದ್ದ ಪ್ರಕರಣ ದಾಖಲು ಮಾಡಬೇಕು. ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣವನ್ನು ಇವರಗಳ ವಿರುದ್ದ ದಾಖಲು ಮಾಡಬೇಕು. ಇಲ್ಲದಿದ್ದರೇ ಮೊದಲು ಡಿವೈಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಭವನದ ಮುಂದೆ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದ ಸಮಿತಿಯು ಸಮರ್ಪಕ ವರದಿಯನ್ನು ನೀಡಿದ್ದು, ಸಂಘದ ಆಸ್ತಿ ಅಕ್ರಮವಾಗಿ ಪರಭಾರೆಯಾಗಿರುವುದು ಮೇಲ್ನೂಟಕ್ಕೆ ಸಾಬೀತಾಗಿದೆ. ಅಲ್ಲದೇ ಅಧ್ಯಕ್ಷರು ಮತ್ತು ಆಡಳಿತ ಮಂಡಲಿಯು ಯಾವುದೇ ರೀತಿಯ ಲೆಕ್ಕಪತ್ರಗಳನ್ನು ನೀಡದೇ ಕಾಲವಕಾಶವನ್ನು ಪಡೆದುಕೊಂಡು ವಿಳಂಬ ಮಾಡಿದೆ. ಇಂಥ ಸಂಘವನ್ನು ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸಮಿತಿ ಹಾಗೂ ಸಹಕಾರ ಸಂಘಗಳ ನಿಬಂಧಕರು ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಂಪೂರ್ಣ ವರದಿಯನ್ನು ನೀಡಿದೆ. ಇದು ಜಾರಿಯಾಗದಂತೆ ಹಾಲಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಕಾರ್ಯದರ್ಶಿ ರಾಜಗೋಪಾಲ್ ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಒಂದು ಕಡೆ ಸರಿಯಾಗಿ ಲೆಕ್ಕಪತ್ರಗಳನ್ನು ನೀಡದೆ. ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಮಂಡಲಿಯೇ ಸಭೆ ಮಾಡಿ, ನ್ಯಾಯಾಲಯದಲ್ಲಿ ಧಾವೆ ಹಾಕಿ ಸಂಘದ ಆಡಳಿತ ಮಂಡಲಿಯ ಪರವಾಗಿ ಹೋರಾಟ ಮಾಡಲು ನಿರ್ಣಯ ಮಾಡಿ, ಕಾರ್ಯದರ್ಶಿಗೆ ಜವಾಬ್ದಾರಿ ನೀಡಿರುವುದು ಸರಿಯಾದ ಕ್ರಮವಲ್ಲ. ಇದರ ಹಿಂದಿನ ಎಲ್ಲಾ ನಡಾವಳಿಗಳಲ್ಲಿ ಎಸ್. ಮಹದೇವಯ್ಯ ಅವರ ಕೈವಾಡ ಇದೆ. ಅವರು ಸರಿಯಾಗಿ ಎರಡು ಕಡೆಯವರಿಗೆ ಮಾಹಿತಿ ರವಾನೆ ಮಾಡಿ, ಸಂಧಾನ ಮಾಡಿದ್ದರೆ, ಇಷ್ಟೊಂದು ದೊಡ್ಡ ಮಟ್ಟಕ್ಕೆ ಪ್ರಕರಣ ಹೋಗುತ್ತಿರಲಿಲ್ಲ. ಅಧ್ಯಕ್ಷರು ಮತ್ತು ನಿರ್ದೇಶಕರನ್ನು ದಾರಿ ತಪ್ಪಿಸುತ್ತಿರುವವರೇ ಎಸ್.ಮಹದೇವಯ್ಯ ಎಂದು ಅವರ ವಿರುದ್ಧ ಕಿಡಿ ಕಾರಿದರು.
ಸಂಘದ ನಿರ್ದೇಶಕರಾಗಿರುವ ಎಸ್. ಮಹದೇವಯ್ಯ, ಕಾರ್ಯದರ್ಶಿ ರಾಜಗೋಪಾಲ್ ಮುಖಾಂತರ 7 ಲಕ್ಷ ರೂ. ತೆಗೆದುಕೊಂಡು ಇನ್ನು ವಾಪಸ್ ಮಾಡಿಲ್ಲ ಎಂದು ಕಾರ್ಯದರ್ಶಿಯೇ ಆರೋಪ ಮಾಡಿದ್ದಾರೆ. ಇವರುಗಳು ಆರ್ಥಿಕವಾಗಿ ಬಲಿಷ್ಟವಾಗಲು ಸಂಘದ ಹಣವನ್ನು ತಮ್ಮ ಇಷ್ಟನುಸಾರ ಬಳಸಿಕೊಂಡಿರುವ ವ್ಯಕ್ತಿ ನಮ್ಮನ್ನು ದೊಡ್ಡ ವ್ಯಕ್ತಿಗಳು ಎಂದು ಹೀಳಿಸಿದ್ದಾರೆ. ಸಂಘದ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿರುವ ಇವರು ದೊಡ್ಡವರು ನಾವಲ್ಲ ? ಎಸ್. ಮಹದೇವಯ್ಯ ಅವರಿಗೆ ನೈತಿಕತೆ ಇದ್ದರೆ ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ, ಸಮಾಜ ಆಸ್ತಿ ಹಾಗು ಹಣ ಪೋಲಾಗುವುದನ್ನು ತಪ್ಪಿಸಲಿ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಸಮಿತಿಯ ಆರ್.ಮಹದೇವ್, ನಲ್ಲೂರು ಸೋಮೇಶ್, ಚನ್ನಂಜಯ್ಯ, ಸಿದ್ದಯ್ಯನಪುರ ಗೋವಿಂದರಾಜು ಹಾಜರಿದ್ದರು.