ಸಾಯಿಬಾಬಾ ಮಂದಿರ ಉದ್ಘಾಟನೆ

93293242-ddce-4d2d-8f51-49fe473984e3
Published on

ಚಾಮರಾಜನಗರ : ನಗರದ ವಿವೇಕನಗರ ಬಡಾವಣೆಯಲ್ಲ್ಲಿರುವ ಫಾರೆಸ್ಟ್ ನರ್ಸರಿ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರವು ಭಾನುವಾರ ಉದ್ಘಾಟನೆಯಾಯಿತು.

ತಿ.ನರಸೀಪುರದ ತ್ರಿವೇಣಿ ಸಂಗಮದಿಂದ ಜಲ ತಂದು ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅದನ್ನು ಸಾಯಿಬಾಬಾ ಮಂದಿರಕ್ಕೆ ತಂದು ಸಾಯಿಬಾಬಾ ವಿಗ್ರಹ ಮತ್ತು ಧ್ಯಾನಾಂಜನೇಯ ಸ್ವಾಮಿ ಪ್ರಾಣ ಪ್ರತಿಷ್ಠಾಪನೆ, ಮಂದಿರದ ಮಹಾಕುಂಭಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯ ಅಂಗವಾಗಿ ಮುಂಜಾನೆಯಿಂದಲೇ ಹೋಮ-ಹವನ, ದೇವತಾ ಪೂಜೆ, ಕಳಸಾರೋಹಣ, ಧ್ವಜಾರೋಹಣ, ಬಲಿದಾನ, ಪೂರ್ಣಾಹುತಿ ಹೋಮಗಳು, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಕಳೆದ ಮೂರು ದಿನಗಳಿಂದ ನಾನಾ ಕಾರ‌್ಯಕ್ರಮಗಳು, ಅನ್ನ ಸಂತರ್ಪಣೆ ಜರುಗಿತು. ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಶ್ರೀಸಾಯಿಬಾಬಾ ಮಂದಿರದಲ್ಲಿ ಶನಿವಾರವೂ ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಪ್ರಾಯಶ್ಚಿತ ಹೋಮ ನಡೆದವು. ಸಂಜೆ 4 ಕ್ಕೆ ಪ್ರಧಾನ, ಶಾಂತಿ-ಪುಷ್ಟಿ, ಕುಟೀರ ಹೋಮಗಳು, ಪೂಜೆ, ಆರತಿ ನಡೆದವು. ಸಂಜೆ ಹರಿಕಥಾ ವಿದುಷಿ ಡಾ.ಮಾಲಿನಿ ಅವರಿಂದ ಶ್ರೀಶಿರಡಿ ಸಾಯಿಬಾಬಾ ವೈಭವದ ಕಥಾವಲೋಕನ ಜರುಗಿತು. ಮಹಾರಾಷ್ಟ್ರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಪ್ರಧಾನ ಅರ್ಚಕರಾದ ಶ್ರೀಪಂಡಿತ್ ಅಮಿತ್ ದೇಶ್‌ಮುಖ್ ಸೇರಿದಂತೆ 5 ಅರ್ಚಕರಿಂದ ಪೂಜಾ ಕೈಂಕರ್ಯಗಳು ನಡೆಯಿತು.

ಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಬಾಲಸುಬ್ರಹ್ಮಣ್ಯಂ, ಕಾರ‌್ಯಾಧ್ಯಕ್ಷ ಎಸ್‌ಪಿಕೆ ಉಮೇಶ್, ಕಾರ್ಯದರ್ಶಿ ಆರ್.ರಾಜು, ಟ್ರಸ್ಟ್‌ನ ಗೌರವಾಧ್ಯಕ್ಷ ಎಂ.ರಾಜು, ಸಹ ಕಾರ‌್ಯದರ್ಶಿ ಮುರುಗೇಶನ್, ಸದಸ್ಯರಾದ ವೇದಿ, ಶಕ್ತಿ, ಉತ್ತರಸ್ವಾಮಿ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net