

ಚಾಮರಾಜನಗರ: ಚಾ.ನಗರ ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಅಕ್ರಮ ಪರಭಾರೆ ಹಾಗೂ ಲೆಕ್ಕಪತ್ರಗಳಲ್ಲಿ ಲೋಪ ಮತ್ತು ಹಣ ದುರುಪಯೋಗ ಪ್ರಕರಣದಲ್ಲಿ ಸಂಘದ ನಿರ್ದೇಶಕ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಪ್ರಮುಖ ಆರೋಪಿ ಎಂದು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿಯ ಸದಸ್ಯ ಅಯ್ಯನಪುರ ಶಿವಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಕ್ರಮ ಆಸ್ತಿ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳಾದ ಸರಗೂರು ಇಶಾಕ್ ಷರೀಪ್, ಶ್ರೀರಂಗಪಟ್ಟಣದ ಶಿವಣ್ಣ, ಚಿಕ್ಕಂಕಹಳ್ಳಿಯ ರಮೇಶ್ ಅವರನ್ನು ಬಂಧಿಸಬೇಕು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣ ದಾಖಲು ಮಾಡಬೇಕು. ಇಲ್ಲದಿದ್ದರೆ ಮೊದಲು ಡಿವೈಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಭವನದ ಮುಂದೆ ಆಮರಣಾಂತ ಉಪವಾಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದ ಸಮಿತಿಯು ಸಮರ್ಪಕ ವರದಿ ನೀಡಿರುವುದನ್ನು ಜಾರಿಗೊಳಿಸದಂತೆ ಹಾಲಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಕಾರ್ಯದರ್ಶಿ ರಾಜಗೋಪಾಲ್ ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇದರ ವಿರುದ್ಧ ನಾವು ಕೂಡ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿಯ ಆರ್.ಮಹದೇವ್, ನಲ್ಲೂರು ಸೋಮೇಶ್, ಚನ್ನಂಜಯ್ಯ, ಸಿದ್ದಯ್ಯನಪುರ ಗೋವಿಂದರಾಜು ಇದ್ದರು.