

ಚಾಮರಾಜನಗರ : ತಾಲೂಕಿನ ಹರದನಹಳ್ಳಿಯ ನಾಯಕ ಜನಾಂಗದ ವತಿಯಿಂದ ಶ್ರೀ ಕಾಳಮ್ಮತಾಯಿ ನೂರೊಂದು ಹಾಲರವೆ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಮುಂಜಾನೆಯೇ ಹೂವಿನ ಅಲಂಕಾರದಿಂದ ದೇವರನ್ನು ಸಿಂಗರಿಸಿ ದೇವರಿಗೆ ಅಭಿಷೇಕ ನೆರವೇರಿಸಲಾಯಿತು. ಗ್ರಾಮದ ಹೊರವಲಯದ ಸಮೀಪ ಗೋಮುಖ ಕ್ಷೇತ್ರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ದೇವರ ವಿಗ್ರಹ ಮತ್ತು ಕಂಡಾಯಗಳಿಗೆ ಸಲ್ಲಿಸಿ, ಅಲ್ಲಿಂದ ಹೊರಟ ಹಾಲರವೆ ಉತ್ಸವದ ಮೆರವಣಿಗೆ ಸತ್ತಿರಸ್ತೆ, ಅಮಚವಾಡಿ ಮತ್ತು ಇನ್ನಿತರ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಾಗಿತು. ಕಂಡಾಯ, ಗೊರವರ ಕುಣಿತ, ಸತ್ತಿಗೆ ಸೂರಿಪನಿ, ನಾದಸ್ವರ, ನೀಲಗಾರರು, ಕಂಸಾಳೆ ಕುಣಿತ, ಇನ್ನಿತರ ಜಾನಪದ ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಶ್ರೀಕಾಳಮ್ಮತಾಯಿ ದೇವಸ್ಥಾನದ ಮುಂಭಾಗದಲ್ಲಿ ಕೊನೆಗೊಂಡಿತು.
ಹಾಲರವೆ ಉತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳನ್ನು ಹಸಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮಹಿಳೆಯರು ಪೂಜೆ ಕೈಂಕರ್ಯಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಈ ವೇಳೆಯಲ್ಲಿ ಯಜಮಾನರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.