

ಕೊಳ್ಳೇಗಾಲ: ಪಟ್ಟಣದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ನಗರಸಭೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಂಜಿಎಸ್‌ವಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮಾರ್ಗವಾಗಿ ಸಾಗಿ ನಗರಸಭೆ ಕಚೇರಿಯ ಮುಂದೆ ಸಮಾವೇಶಗೊಂಡ ಪ್ರತಿಭಟನಾಕಾರರು ನಗರಸಭೆ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿದರು.
ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಗಣೇಶ್ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ಈ ಬಗ್ಗೆ ವಾರದ ಹಿಂದೆಯೇ ದೂರು ನೀಡಿ ಪೌರಯುಕ್ತರ ಗಮನಸೆಳೆದಿದೆ. ಆದರೆ, ಯಾವುದೇ ಕ್ರಮವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೌರಯುಕ್ತ ರಮೇಶ್, ಒಂದು ತಿಂಗಳೊಳಗೆ ಸಾಮಾನ್ಯ ಸಭೆ ಕರೆದು ಅನುಮತಿ ಪಡೆದು ರಸ್ತೆ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲಾಗುವುದು. ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಶಾಸ್ತ್ರಿ, ಜಿಲ್ಲಾ ಉಪಾಧ್ಯಕ್ಷ ಸೈಯದ್ ಸಮೀ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್. ಎಂ, ಶ್ರೀನಿವಾಸ್ ಬೂದುಬಾಳು ಸಹ ಕಾರ್ಯದರ್ಶಿ, ಜಯಶಂಕರ್, ಯಳಂದೂರು ತಾಲೂಕು ಅಧ್ಯಕ್ಷೆ ರಂಗರಾಜು ಮತ್ತಿತರಿದ್ದರು.