

ಚಾಮರಾಜನಗರ: ಚಿತ್ರದುರ್ಗದ ವೀರಶೈವ ಲಿಂಗಾಯತ ಸಮಾಜದ ರೇಣುಕಾಸ್ವಾಮಿ ಹತ್ಯೆಯನ್ನು ಖಂಡಿಸಿ ಚಿತ್ರನಟ ದರ್ಶನ್ ವಿರುದ್ಧ ಅಣಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಜೂ.18 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 10.30 ಗಂಟೆಗೆ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾಡಳಿತ ಭವನದಲ್ಲಿ ಅಂತ್ಯವಾಗಲಿದೆ. ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಬಸವ ಬಳಗ, ಮಹಿಳಾ ಕದಳಿ ವೇದಿಕೆ ಹಾಗೂ ಸಮಾಜದ ವಿವಿಧ ಮಠಾಧೀಶರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಜನರು ಭಾಗವಹಿಸಲಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೈದವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ಕೃತ್ಯಕ್ಕೆ ಪರೋಕ್ಷ್ವಆಗಿ ಕಾರಣವಾಗಿರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಟ ದರ್ಶನ್ ಅವರನ್ನು ವಜಾ ಮಾಡಬೇಕು. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೇ, ಆರೋಪಿ ಸ್ಥಾನದಲ್ಲಿರುವವರನ್ನು ರಕ್ಷಿಸದೇ. ಸರ್ಕಾರವು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದೇ ಹತ್ಯೆಯಾದ ರೇಣುಕಸ್ವಾಮಿ ಕುಟುಂಬದ ಜತೆ ನಿಲ್ಲಬೇಕಿದೆ. ಅವರ ಕುಟುಂಬಕ್ಕೆ ಹೆಚ್ಚಿನ ನೆರವನ್ನು ನೀಡಬೇಕಿದೆ ಎಂದು ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಜನರು ಸೇರುವ ನಿರೀಕ್ಷೆ ಇದೆ.