

ಚಾಮರಾಜನಗರ: ತಾಲೂಕಿನ ಶಿವಪುರ ಗ್ರಾಮದ ಸರ್ವೆ ನಂ.64ರಲ್ಲಿ ಜಿಲ್ಲಾ ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗಾಗಿ ಮಂಜೂರಾದ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್‌ಪ್ರಕಾಶ್ ಮೀನಾ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರ ಜಿಲ್ಲೆಗೊಂದು ಜಿಲ್ಲಾ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕ ಮಂಜೂರು ಮಾಡಿದ್ದು, ಘಟಕ ಸ್ಥಾಪನೆಗಾಗಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಸರ್ವೆ ನಂ.64ರಲ್ಲಿ 1 ಎಕರೆ ಜಾಗ ನೀಡಿದೆ. ಈ ಸ್ಥಳವು ಸೂಕ್ತವಾಗಿದ್ದು, ಘಟಕ ಸ್ಥಾಪನೆಗಾಗಿ ಸರ್ಕಾರ 2 ಕೋಟಿ ರೂ. ಮಂಜೂರು ಮಾಡಿದೆ. ಸದ್ಯದಲ್ಲೇ ಕಾಮಗಾರಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಈ ವೇಳೆ ಯೋಜನಾ ನಿರ್ದೇಶಕ ಕಿರಣ್ ಪಡ್ನೇಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಧುಸೂದನ್, ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಸಹಾಯಕ ನಿರ್ದೇಶಕ ಪಿ.ಎಸ್.ಪ್ರಕಾಶ್‌ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಮಹದೇವಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಇದ್ದರು.