ರೈತರಿಗೆ ಸಾಲದ ನೋಟಿಸ್ ನೀಡಿ ಕಿರುಕುಳ

Published on

ಚಾಮರಾಜನಗರ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ರೈತರಿಗೆ ಸಾಲದ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಆರೋಪಿಸಿದರು.

ಜಿಲ್ಲೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಆಯಾ ಶಾಖೆಯ ಮ್ಯಾನೇಜರ್‌ಗಳು ರೈತರು ಒಟಿಎಸ್ ಹೋದ ಸಂದರ್ಭದಲ್ಲಿ ಇತ್ಯರ್ಥ ಮಾಡದೆ ಅಲೆದಾಡಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿರುವ ಬ್ಯಾಂಕ್‌ಗಳಿಗೆ ಬೀಗ ಹಾಕುವ ಕೆಲಸ ಮಾಡಬೇಕಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತರು 2013ರಿಂದಲೂ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದು, ಬೇರೆ ಬ್ಯಾಂಕ್‌ಗಳಲ್ಲಿ ಶೇ.10 ರಷ್ಟು ಪಾವತಿ ಮಾಡಿಸಿಕೊಂಡು ಇತ್ಯರ್ಥಪಡಿಸಿದ್ದಾರೆ. ಇದೇ ರೀತಿ ಇತ್ಯರ್ಥಪಡಿಸಿಕೊಡುವಂತೆ ಬ್ಯಾಂಕ್‌ನ ಮ್ಯಾನೇಜರ್‌ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಚಂದಕವಾಡಿಯಲ್ಲಿರುವ ಬ್ಯಾಂಕ್‌ನಿಂದ ರೈತರಿಗೆ ನೋಟಿಸ್ ನೀಡಿದ್ದು, ನೈಸರ್ಗಿಕ ವಿಪತ್ತಿನಡಿ ಕೃಷಿ ಸಾಲದ ರಿನಿವಲ್ ಮಾಡಿಕೊಳ್ಳುವಂತೆ ಹೆದರಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದರು.

ಈ ವರ್ಷದಲ್ಲಿ ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ 4 ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಫಸಲು ನಾಶವಾಗಿದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿದೆ. 2 ತಿಂಗಳಾದರೂ ಸರ್ಕಾರ ಫಸಲು ನಷ್ಟ ಸಂಬಂಧ ನೋಂದಣಿ ಮಾಡಲು ಲಾಗಿನ್ ತೆರೆದಿಲ್ಲ. ಲಾಗಿನ್ ತೆರೆದರೆ ಮಾತ್ರ ಗ್ರಾಮಲೆಕ್ಕಿಗರು ಫಸಲು ನಷ್ಟ ನೋಂದಣಿ ಮಾಡಲು ಸಾಧ್ಯ. ಇದರಿಂದ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, 14 ದಿನ ಕಳೆದರೂ ಜಿಲ್ಲಾಧಿಕಾರಿಗಳು ರೈತರ ಸಭೆ ಕರೆದಿಲ್ಲ. ಜಿಲ್ಲಾಡಳಿತ ರೈತರನ್ನು ನಿರ್ಲಕ್ಷ್ಯ ಮಾಡಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಕಾರ್ಯಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮುಖಂಡ ಮಲ್ಲಣ್ಣ, ಭೂಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net