ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.
ಗ್ರಾಮದಲ್ಲಿ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿನ ಜನರ ಕೋರಿಕೆ ಮೇರೆಗೆ ಬಸ್ ನಿಲುಗಡೆಯ ನಾಮಫಲಕವನ್ನೂ ಶಾಸಕರು ಅನಾವರಣ ಮಾಡಿದ್ದಾರೆ. ಆದರೆ, ಇಲ್ಲಿ ಬಸ್‌ಗಳು ನಿಲ್ಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ನಿತ್ಯ ಮಲೆಮಹದೇಶ್ವರ ಬೆಟ್ಟ, ಬೆಂಗಳೂರು, ಮೈಸೂರು, ಚಾಮರಾಜನಗರ, ಕೊಳ್ಳೇಗಾಲಕ್ಕೆ ನೂರಾರು ಜನರು ತೆರಳುತ್ತಾರೆ. ಇವರು ಬಸ್ ಹತ್ತಲು ಇಳಿಯಲು ಯಳಂದೂರು ಬಸ್ ನಿಲ್ದಾಣಕ್ಕೆ ತೆರಳುವ ಅನಿವಾರ್ಯತೆ ಇದೆ. ಅಲ್ಲಿಂದ ಇಲ್ಲಿಗೆ ಆಟೋ ಮೂಲಕ ಮತ್ತೆ ಹಣ ನೀಡಿ ಬರುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ.
ಬಸ್ ನಿಲ್ಲಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಪತ್ರ ನೀಡಿದ್ದಾರೆ. ಆದರೆ, ಬಸ್ ಚಾಲಕ, ನಿರ್ವಾಹಕರು ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಉದ್ಧಟತನದಿಂದ ವರ್ತಿಸುತ್ತಾರೆ. ಹಿರಿಯ ನಾಗರಿಕರು, ಮಹಿಳೆಯರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಇದನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ಮೇನೇಜರ್ ಕುಮಾರ್ ನಾಯಕ್ ಭೇಟಿ ನೀಡಿ, ನಾವು ಇಲ್ಲಿ ಕೋರಿಕೆ ನಿಲ್ದಾಣ ನೀಡಿದ್ದೇವೆ. ತಡೆ ರಹಿತ ಬಸ್ ಹೊರತುಪಡಿಸಿ ಇತರ ಬಸ್‌ಗಳು ಇಲ್ಲಿ ನಿಲುಗಡೆಯಾಗಬೇಕೆಂದು ಸೂಚನೆ ನೀಡುತ್ತೇನೆ. ಬಸ್ ನಿಲ್ಲಿಸದಿದ್ದಲ್ಲಿ ಅಂತಹ ಬಸ್‌ನ ಸಂಖ್ಯೆ ತಿಳಿದು ದೂರು ನೀಡಿದ್ದಲ್ಲಿ ಅವರ ವಿರುದ್ಧ ಕ್ರಮ ವಹಿಸುವೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆದುಕೊಳ್ಳಲಾಯಿತು.
ಗ್ರಾಪಂ ಸದಸ್ಯರಾದ ಚಿನ್ನಸ್ವಾಮಿ, ಪ್ರವೀಣ, ಮುಖಂಡರಾದ ಲೋಕೇಶ್‌ಮೌರ್ಯ, ಎಚ್. ಶ್ರೀನಿವಾಸ್, ಮಹೇಶ, ಗೋವಿಂದಶೆಟ್ಟಿ, ಶಿವರಾಮ, ಚಿಕ್ಕರಂಗಯ್ಯ, ಶ್ರೀಕಂಠ, ನಿಂಗಯ್ಯ, ಪುಟ್ಟಯ್ಯ, ನಾಗೇಂದ್ರ, ನಾರಾಯಣ, ಚಂದ್ರು ಸಿಪಿಐ ಶ್ರೀಕಾಂತ್ ಇತರರು ಇದ್ದರು.