ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅತ್ಯಗತ್ಯ

13rajesh6
Published on

ಚಾಮರಾಜನಗರ : ವಿದ್ಯಾರ್ಥಿಗಳಿಗೆ ಕಾನೂನಿನ ತಿಳುವಳಿಕೆ ನೀಡಿದರೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು.

ನಗರದ ಸಮೀಪದ ಮಲ್ಲಯ್ಯನಪುರದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ, ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಕಾನೂನು ಮತ್ತು ಶಿಕ್ಷಣದ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ದಿನೇ ದಿನೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳು ಅಪರಾಧವೆಸಗದಂತೆ ಬಾಲ್ಯದಿಂದಲೇ ಸನ್ನಡತೆಯತ್ತ ಕೊಂಡೊಯ್ಯುವ ಮಹತ್ತರ ಜವಾಬ್ದಾರಿಯನ್ನು ಶಿಕ್ಷಕರು ವಹಿಸಬೇಕು. ಶಾಲೆಗಳಲ್ಲಿ ಹೆಚ್ಚು ಹೆಚ್ಚು ಕಾನೂನು ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಯಾರು ಕೂಡ ಅಪರಾಧದ ನಂಟು ಹೊಂದದಂತೆ ಎಚ್ಚರ ವಹಿಸಬೇಕು ಎಂದರು.

ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಷ್ಟೇ ಅಲ್ಲ. ಶಿಕ್ಷಣ ಎಂದರೆ ಹೆಚ್ಚಿನ ಅಂಕ ಗಳಿಸುವುದಷ್ಟೇ ಅಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಆತ್ಮವಿಶ್ವಾಸ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ವಿನಯವನ್ನು ಕಲಿಸಬೇಕಿದೆ. ಶಿಕ್ಷಣವು ಜನರನ್ನು ಸಾಕ್ಷರರನ್ನಾಗಿ ಮಾಡುತ್ತದೆ. ಶಿಕ್ಷಣವು ವ್ಯಕ್ತಿಯಲ್ಲಿ ಸಂವಹನ ಕೌಶಲ ಬೆಳೆಸುತ್ತದೆ. ಈ ಯುಗದಲ್ಲಿ ವ್ಯಕ್ತಿಯನ್ನು ಉತ್ತಮ ತಂತ್ರಜ್ಞಾನದ ಬಳಕೆದಾರನಾಗಿ ಮಾಡಿಸುತ್ತದೆ. ಶಿಕ್ಷಣದ ಸಹಾಯದಿಂದ ಜನರು ಹೆಚ್ಚು ಪ್ರಬುದ್ಧರಾಗುತ್ತಾರೆ ಎಂದರು.

ಶಾಲೆಯ ಪ್ರಾಂಶುಪಾಲ ಎಂ.ಎನ್.ಚಂದ್ರು ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳು ಪಠ್ಯ ವಿಷಯಗಳೊಂದಿಗೆ ಕಾನೂನಿನ ಜ್ಞಾನವನ್ನು ಪಡೆಯುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು. ಯುವ ಸ್ಪಂದನ ಕೇಂದ್ರದ ಜಿಲ್ಲಾ ಯುವ ಪರಿವರ್ತಕ ಎಸ್.ಗುರುರಾಜು, ಶಾಲೆಯ ಶಿಕ್ಷಕ ರಾಜೇಶ್,ವಿ.ಗರುಡರಾಜು, ಎಂ.ಬಿ.ಲೀಲಾವತಿ, ಸಿ.ರಶ್ಮಿ, ಸೌಮ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net