ಅರಣ್ಯ ಸಂರಕ್ಷಣೆಗೆ ಜನರ ಸಹಕಾರ ಅಗತ್ಯ

13rajesh1
Published on

ಚಾಮರಾಜನಗರ: ಅರಣ್ಯ ಮತ್ತು ಪ್ರಾಣಿಗಳ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಬಿಆರ್‌ಟಿ ಹುಲಿ ಯೋಜನೆಯ ನಿರ್ದೇಶಕಿ ದೀಪಾ ಜೆ.ಕಾಂಟ್ರಾಕ್ಟರ್ ಅಭಿಪ್ರಾಯಪಟ್ಟರು.

ತಾಲೂಕಿನ ಅರಕಲವಾಡಿ ಗ್ರಾಪಂ ವ್ಯಾಪ್ತಿಯ ಲಿಂಗನಪುರ ಗ್ರಾಮದಲ್ಲಿ ಬುಧವಾರ ಹೊಸಹಳ್ಳಿ, ವಡ್ಡರಹಳ್ಳಿ, ಯಾನಗಹಳ್ಳಿ, ಮುಂಚಗುಂಡಿಪುರ, ಅರಕಲವಾಡಿ ಗ್ರಾಮಸ್ಥರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಭಾಗದ ಗ್ರಾಮಗಳಲ್ಲಿ ಕಳೆದ ಹಲವು ವರ್ಷಗಳಿಂದ ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗಿ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ರೈತರು ತಮ್ಮ ಜಮೀನುಗಳಲ್ಲಿ ಅಪಾರ ಬೆಳೆಗಳನ್ನು ಪ್ರತಿವರ್ಷ ಕಾಡು ಪ್ರಾಣಿಗಳ ಹಾವಳಿಯಿಂದ ಕಳೆದುಕೊಳ್ಳುತ್ತಿದ್ದರು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, 1.10 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಬೇಲಿ ಮತ್ತು ಆನೆ ಕಂದಕ ನಿರ್ಮಾಣ ಮಾಡಿದ್ದರಿಂದ ಮಾನವ-ಪ್ರಾಣಿ ಸಂಘರ್ಷ ಕಡಿಮೆಯಾಗಿದೆ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಾತನಾಡಿ, ಈ ಭಾಗದ ರೈತರ ಸಮಸ್ಯೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ತಮಿಳುನಾಡು ಗಡಿ ಇದ್ದರೂ ಸೋಲಾರ್ ಬೇಲಿ ವತ್ತು ಆನೆ ಕಂದಕವನ್ನು ನಿರ್ಮಾಣ ಮಾಡುವ ಮೂಲಕ ಆನೆ ಉಪಟಳವನ್ನು ಕಡಿಮೆ ಮಾಡಿದ್ದೇವೆ. ನಮ್ಮ ಈ ಕೆಲಸಕ್ಕೆ ರೈತರು ಸಹ ಸೋಲಾರ್ ಅಳವಡಿಸಲು ತಮ್ಮ ಜಮೀನುಗಳನ್ನು ಬಿಟ್ಟು ಸಹಕಾರ ನೀಡಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಲಯ ಅರಣ್ಯಾಧಿಕಾರಿ ಉಮೇಶ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕಲವಾಡಿ ಗುರುಸ್ವಾಮಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಮಹದೇವಸ್ವಾಮಿ, ಕೆಂಪಣ್ಣ, ಮಾಧು, ರಾಜಸ್ವ ನಿರೀಕ್ಷಕ ಗುರುಸಿದ್ದಪ್ಪ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net