

ಚಾಮರಾಜನಗರ: ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರವನ್ನು ಜೂ.16ರಂದು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಆರ್.ರಾಜು ಹೇಳಿದರು.
ಮಂದಿರ ಉದ್ಘಾಟನೆ ಪ್ರಯುಕ್ತ ಜೂ.14ರಂದು ಬೆಳಗ್ಗೆ ಮತ್ತು ಸಂಜೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಸಂಜೆ 6 ಗಂಟೆಗೆ ಬಾಬಾ ಅವರ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. 15ರಂದು ಸಂಜೆ 4 ಗಂಟೆಗೆ ಪ್ರಧಾನ ಹೋಮ, ಶಾಂತಿ-ಪುಷ್ಟಿ ಹೋಮಗಳು, ಕುಠೀರ ಹೋಮ, ಪೂಜೆ, ಆರತಿ ನಡೆಯಲಿದೆ. ಸಂಜೆ 6 ಗಂಟೆಗೆ ವಿದುಷಿ ಡಾ.ಮಾಲಿನಿ ಸಾಯಿ ಬಾಬಾರ ವೈಭವದ ಕಥಾವಲೋಕನ ಜರುಗಲಿದೆ. 16ರಂದು ತ್ರಿವೇಣಿ ಸಂಗಮದಿಂದ ನೀರು ತಂದು ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಂದಿರಕ್ಕೆ ಕೊಂಡೊಯ್ಯಲಾಗುವುದು. ದೇವರ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಟ್ರಸ್ಟ್ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ ಮಾತನಾಡಿ, ರಾಜಸ್ಥಾನದ ಜೈಪುರದಿಂದ ಸಾಯಿ ಬಾಬಾ ಮೂಲ ವಿಗ್ರಹ ತಯಾರಿಸಲಾಗಿದೆ. ಅಯೋಧ್ಯೆಯಲ್ಲಿ ಧ್ಯಾನ ಸ್ಥಿತಿಯಲ್ಲಿರುವ ಆಂಜನೇಯನ ವಿಗ್ರಹದಂತೆಯೇ ಮಂದಿರದಲ್ಲಿ ಧ್ಯಾನಾಂಜನೇಯ ವಿಗ್ರಹ ನಿರ್ಮಾಣವಾಗಿದೆ. ಈ ವಿಗ್ರಹಕ್ಕೆ ಮಹಾರಾಷ್ಟ್ರದ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಪ್ರಧಾನ ಅರ್ಚಕ ಪಂಡಿತ್ ಅಮಿತ್ ದೇಶ್‌ಮುಖ್ ಪೂಜೆ ಸಲ್ಲಿಸಲಿದ್ದಾರೆ ಎಂದರು. ಟ್ರಸ್ಟ್‌ನ ಗೌರವಾಧ್ಯಕ್ಷ ಎಂ.ರಾಜು, ಕಾರ್ಯಾಧ್ಯಕ್ಷ ಉಮೇಶ್, ಸಹ ಕಾರ್ಯದರ್ಶಿ ಮುರುಗೇಶ್, ಸದಸ್ಯರಾದ ಶಕ್ತಿ, ಉತ್ತರಸ್ವಾಮಿ ಇದ್ದರು.