

ಚಾಮರಾಜನಗರ: ರೈತರು ಸಮಗ್ರ ಕೃಷಿ ಮತ್ತು ಮಣ್ಣು, ನೀರು ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್.ಅಬೀದ್ ಹೇಳಿದರು.
ತಾಲೂಕಿನ ಹರದನಹಳ್ಳಿ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಮುಂಗಾರು ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಪೂರ್ವ ಮುಂಗಾರು ತಡವಾಗಿದ್ದರಿಂದ ಸೂರ್ಯಕಾಂತಿ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣ ಅಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಮುಸುಕಿನ ಜೋಳಕ್ಕೆ ರೈತರು ಹೆಚ್ಚು ಓಲೈಸಿದ್ದಾರೆ. ಇದೇ ನಿಟ್ಟಿನಲ್ಲಿ ಪರ್ಯಾಯವಾಗಿ ವಿಶ್ವವಿದ್ಯಾನಿಲಯದಿಂದ ಪರಿಚಯಿಸಿರುವ ಸುಧಾರಿತ, ಅಲ್ಪಾವಧಿ ದ್ವಿದಳ ಧಾನ್ಯ ತಳಿಗಳ ಬೇಸಾಯ ಕೈಗೊಂಡು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸಿ.ದೊರಸ್ವಾಮಿ ಮಾತನಾಡಿ, ಈ ರೀತಿಯ ವಿಸ್ತರಣಾ ಕಾರ್ಯಕ್ರಮಗಳು ರೈತರಿಗೆ ಉತ್ತಮ ತಾಂತ್ರಿಕ ಮಾಹಿತಿ ಕೊಡುವ ಒಂದು ವ್ಯವಸ್ಥೆಯಾಗಿದ್ದು, ಒಂದೇ ವೇದಿಕೆಯಲ್ಲಿ ವಿಜ್ಞಾನಿಗಳು ಮತ್ತು ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು, ರೈತರಿಗೆ ಲಭ್ಯವಾಗಿರುತ್ತಾರೆ. ಈ ನಿಟ್ಟಿನಲ್ಲಿ ರೈತರು ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡು ಉತ್ತಮ ಬೇಸಾಯ ಕೈಗೊಳ್ಳಬೇಕೆಂದು ತಿಳಿಸಿದರು.
ಪ್ರಾಣಿಶಾಸ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ನಟರಾಜು ಮಾತನಾಡಿ, ಕಡಿಮೆ ಖರ್ಚಿನಲ್ಲಿ ಪಶು ಸಂಗೋಪನೆ ಕೈಗೊಳ್ಳಲು ಆಹಾರ ನಿರ್ವಹಣೆ ಮತ್ತು ಆರೋಗ್ಯ ನಿರ್ವಹಣೆಗೆ ಸುಲಭ ಹಾಗೂ ಸ್ಥಳೀಯ ಕ್ರಮಗಳನ್ನು ಅನುಸರಿಸಬೇಕು. ರೈತರು ಕೃತಕ ಆಹಾರಗಳಿಗೆ ಹೆಚ್ಚಿನ ಖರ್ಚು ಮಾಡುತ್ತಿದ್ದು, ಸ್ಥಳೀಯವಾಗಿ ಸಿಗುವ ಏಕದಳ ಧಾನ್ಯ, ದ್ವಿದಳ ಧಾನ್ಯಗಳು ಹಾಗೂ ಇತರ ಮೇವಿನ ಬೆಳೆಗಳ ಸಂಯೋಜನೆ ಮಾಡಿ ಕಡಿಮೆ ಖರ್ಚಿನಲ್ಲಿ ಪಶು ಆಹಾರವನ್ನು ತಾವೇ ಉತ್ಪಾದಿಸಿ ನಿರ್ವಹಿಸಬೇಕೆಂದು ತಿಳಿಸಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಗಿರೀಶ್ ಮಾತನಾಡಿದರು. ಡಾ.ಮನೋಹರ್, ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಪ್ರಾಯೋಜನೆಯ ಮುಖ್ಯಸ್ಥ ಡಾ.ಶಶಿಕುಮಾರ್, ತೋಟಗಾರಿಕಾ ವಿಜ್ಞಾನಿ ಡಾ.ಮೋಹನ್‌ಕುಮಾರ್, ಕೆವಿಕೆ ಮುಖ್ಯಸ್ಥ ಡಾ.ಯೋಗೇಶ್, ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ್ ಎಸ್.ಕಳ್ಳೀಮನಿ ಇದ್ದರು.