

ಹನೂರು; ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಯಲ್ಲಿ ಪ್ರವೇಶಾತಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ.
ಇಂಡಿಗನತ್ತ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಮಾತ್ರ ಇದೆ. ಹಾಗಾಗಿ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಮ.ಬೆಟ್ಟ, ಹನೂರು ಹಾಗೂ ಇತರ ಕಡೆಗಳ ಶಾಲೆಯಲ್ಲಿ ದಾಖಲಾಗಬೇಕಿತ್ತು. ಇದರಿಂದ ಮಕ್ಕಳು ಹಾಗೂ ಪಾಲಕರಿಗೆ ತುಂಬ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಶಾಲೆಯಲ್ಲಿ ಮುಂದಿನ ತರಗತಿಗಳನ್ನು ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
ಮತಗಟ್ಟೆ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸುವ ಸಂಬಂಧ ಜೂ.10 ರಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಕೊಳ್ಳೇಗಾಲದ ಶಾಸಕ ಎ.ಆರ್ ಕೃಷ್ಣಮೂರ್ತಿ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ಇಂಡಿಗನತ್ತ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಗ್ರಾಮದ ಶಾಲೆಯಲ್ಲೇ ಮುಂದಿನ ತರಗತಿ ಆರಂಭಿಸಬೇಕು. ಇಲ್ಲವೇ ವಸತಿ ಶಾಲೆಯಲ್ಲಿ ಮುಂದಿನ ತರಗತಿಗೆ ಪ್ರವೇಶಾತಿ ಕಲ್ಪಿಸುವಂತೆ ಮನವಿ ಮಾಡಿದ್ದರು.
ಈ ಸಂಬಂಧ ಸಚಿವ ಎಚ್.ಸಿ.ಮಹದೇವಪ್ಪ ಅವರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಇಂಡಿಗನತ್ತ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಪ್ರವೇಶಾತಿ ಕಲ್ಪಿಸುವಂತೆ ಸೂಚನೆ ನೀಡಿದ್ದರು. ಹಾಗಾಗಿ, ಜಿಲ್ಲಾಧಿಕಾರಿ ಅವರು 17 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಇದರ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಹನೂರು, ಉಮ್ಮತ್ತೂರು, ತಿಮ್ಮರಾಜೀಪುರ, ಬಿಳಿಗಿರಿರಂಗನ ಬೆಟ್ಟ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ತಿಮ್ಮರಾಜೀಪುರ ಹಾಗೂ ರಾಮಾಪುರ, ಪಾಳ್ಯದ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಿಗೆ ಆದೇಶಿಸಿದ್ದಾರೆ.
ಹನೂರು ಮುರಾರ್ಜಿ ವಸತಿ ಶಾಲೆಗೆ ನಾಲ್ವರು ವಿದ್ಯಾರ್ಥಿಗಳು, ಉಮ್ಮತ್ತೂರು, ಹೂಗ್ಯಂ, ಬಿಳಿಗಿರಿರಂಗನ ಬೆಟ್ಟ ಶಾಲೆಗೆ ತಲಾ ಒಬ್ಬರು, ತಿಮ್ಮರಾಜೀಪುರ ಶಾಲೆಗೆ ಇಬ್ಬರು, ಕಿತ್ತೂರು ರಾಣಿ ಚನ್ನಮ್ಮ ತಿಮ್ಮರಾಜೀಪುರ ಶಾಲೆಗೆ ಮೂವರು, ರಾಮಾಪುರದ ಇಂದಿರಾಗಾಂಧಿ ವಸತಿ ಶಾಲೆಗೆ ಮೂವರು ಹಾಗೂ ಪಾಳ್ಯದ ಶಾಲೆಗೆ ಇಬ್ಬರು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.