

ಕೊಳ್ಳೇಗಾಲ: ಯುವ ಶಕ್ತಿಗಳು ದುಶ್ಚಟಗಳಿಂದ ದೂರವಿರಬೇಕೆಂದು ಲೊಕ್ಕನಹಳ್ಳಿ ಸಮೀಪದ ಜೇತವನದ ಮನೋರಖ್ಖಿತ ಬಂತೇಜಿ ಹೇಳಿದರು.
ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ಮಂಗಳವಾರ ಡಾ.ಭೀಮ್‌ರಾವ್ ಯೂತ್ಸ್ ಕೋ ಅಪರೇಟಿವ್ ಸೊಸೈಟಿ(ರಿ) ನಾಮಫಲಕ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯುವಕರು ಮದ್ಯವ್ಯಸನಕ್ಕೆ ಒಳಗಾದರೆ ಯಾವ ಸಾಧನೆಯನ್ನೂ ಮಾಡಲಾಗುವುದಿಲ್ಲ. ಗ್ರಾಮೀಣ ಭಾಗದ ಯುವಕರು ದುಶ್ಚಟದಿಂದ ದೂರವಿದ್ದು, ದೇಶವನ್ನು ಆಳುವ ದೊಡ್ಡ ಶಕ್ತಿಯಾಗಬೇಕಿದೆ. ಭಗವಾನ್ ಬುದ್ಧ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ತೋರಿಸಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಡಾ.ಭೀಮ್‌ರಾವ್ ಯೂತ್ಸ್ ಕೋ ಅಪರೇಟಿವ್ ಸೊಸೈಟಿ (ರಿ) ಆರಂಭಿಸಿರುವುದು ಒಳ್ಳೆಯ ಕೆಲಸವಾಗಿದೆ. ಈ ಮೂಲಕ ಸಮಾಜ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು. ವಿಚಾರವಾದಿ ಮಹದೇವಕುಮಾರ್ ಮಾತನಾಡಿ, ಅಂಬೇಡ್ಕರ್ ತಿಳಿಸಿಕೊಟ್ಟ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು. ಅಂಬೇಡ್ಕರ್ ಅವರ ಸಂವಿಧಾನದಿಂದ ಎಲ್ಲರೂ ದೇಶದಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಅಂಬೇಡ್ಕರ್ ಒಂದು ಜಾತಿಗೆ ಸಿಮೀತವಾದರಲ್ಲ. ಎಲ್ಲರ ಆಸ್ತಿಯಾಗಿದ್ದಾರೆ. ಇಡೀ ವಿಶ್ವಕ್ಕೆ ಜ್ಞಾನದ ಬೆಳಕು ನೀಡಿದವರು ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಎಸ್.ನಾಗರಾಜು, ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಎಸ್.ಬಸವರಾಜು, ಗ್ರಾ.ಪಂ. ಸದಸ್ಯ ನಂಜುಂಡ, ನಯನ, ಅಶ್ವಿನಿ, ಗ್ರಾಮದ ಯಜಮಾನರಾದ ರಾಜಪ್ಪ, ಮರಿಸ್ವಾಮಿ, ಪುಟ್ಟಮಾದ, ಕುಮಾರ್, ರಾಜೇಂದ್ರ, ಸುಂದರ್, ಪ್ರದೀಪ್ ಇದ್ದರು.