

ಚಾಮರಾಜನಗರ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜೂ.14ರಂದು ನಗರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ತಿಳಿಸಿದರು.
ರಕ್ತ ನಿಧಿ ಕೇಂದ್ರ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ರೋಟರಿ ಸಿಲ್ಕ್ ಸಿಟಿ ಸಹಯೋಗದಲ್ಲಿ ನಗರದ ರೋಟರಿ ಭವನದಲ್ಲಿ ಅಂದು ಬೆಳಗ್ಗೆ 9ರಿಂದ 1 ಗಂಟೆಯವರೆಗೆ ನಡೆಯಲಿರುವ ಶಿಬಿರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಉದ್ಘಾಟನೆ ಮಾಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ್ ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿಬಿರದಲ್ಲಿ ರಕ್ತದಾನಿಗಳಿಗೆ ಸನ್ಮಾನ ಮಾಡಲಾಗುವುದು. ಇದಕ್ಕೂ ಮುನ್ನ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ರೋಟರಿ ಭವನದ ತನಕ ಜಾಗೃತಿ ಜಾಥಾ ನಡೆಯಲಿದೆ. ರೋಟರಿ ಸಿಲ್ಕ್ ಸಿಟಿ ವತಿಯಿಂದ ಕಳೆದ 7-8 ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.
ಸಂಸ್ಥೆಯ ವಿಶ್ವಾಸ್ ಮಾತನಾಡಿ, ರಕ್ತದಾನ ಶಿಬಿರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು. ಸಂಸ್ಥೆಯ ಕಾರ್ಯದರ್ಶಿ ಮಾಣಿಕ್‌ಚಂದ ಶಿರ್ವಿ, ಮಾಜಿ ಅಧ್ಯಕ್ಷ ನಂಜಯ್ಯ, ಪ್ರಶಾಂತ್, ಸದಸ್ಯ ಆರ್.ರಾಜು ಇದ್ದರು.