ಚಿರತೆ ದಾಳಿ ಬಗ್ಗೆ ಅರಣ್ಯಾಧಿಕಾರಿಗಳಿಂದ ಜಾಗೃತಿ

10-kglphoto-6,
Published on

ಕೊಳ್ಳೇಗಾಲ : ತಾಲೂಕಿನ ಗುಂಡಾಲ್ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕಳೆದ ಆರು ದಿನಗಳಿಂದ ಚಿರತೆಯೊಂದು ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿ ಮಾಡುತ್ತಿರುವುದರಿಂದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಅಧಿಕಾರಿಗಳು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.

ಗುಂಡಾಲ್ ಅರಣ್ಯ ಪ್ರದೇಶ ಹಂಚಿನಲ್ಲಿರುವ ಮೋಡಳ್ಳಿ ಹಾಗೂ ಇನ್ನಿತರ ಕಡೆಗೆ ಮಂಗಳವಾರ ಭೇಟಿ ನೀಡಿದ ಬಿಆರ್‌ಟಿಹುಲಿ ಸಂರಕ್ಷಿತ ಪ್ರದೇಶ ಡಿಸಿಎಫ್ ದೀಪಾ ಕಂಟ್ರಾ ಕ್ಟರ್ ರೈತರ ಸಮಸ್ಯೆಯನ್ನು ಆಲಿಸಿದರು. ಚಿರತೆ ದಾಳಿ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಜಾಗೃತಿ ಮೂಡಿದರು.

ಈ ವೇಳೆ ರೈತರು ಕಳೆದ ಐದಾರು ದಿನಗಳಿಂದ ಚಿರತೆ ಯೊಂದು ರೈತರ ಜಮೀನುಗಳಲ್ಲಿ ಓಡಾಡುತ್ತಿದೆ. ಕುರಿ, ಮೇಕೆ ಹಾಗೂ ಕೋಳಿಗಳ ಮೇಲೆ ದಾಳಿ ನಡೆಸುತ್ತಿದೆ. ಇದ್ದರಿಂದ ಈ ಭಾಗದ ಜನರಲ್ಲಿ ಚಿರತೆ ದಾಳಿ ಬಗ್ಗೆ ಆತಂಕ ಮೂಡಿದೆ. ರಾತ್ರಿ ವೇಳೆ ಜಮೀನಿಗೆ ಹೋಗಲು ರೈತರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವಾರದಿಂದ ಚಿರತೆ ಓಡಾಡುತ್ತಿದ್ದರೂ ಅರಣ್ಯಾಧಿಕಾರಿಗಳು ಅದನ್ನು ಸೆರೆಹಿಡಿದಿಲ್ಲ ಎಂದು ದೂರಿದರು.

ಈ ವೇಳೆ ಡಿಸಿಎಫ್ ದೀಪಾ ಕಂಟ್ರಾಕ್ಟರ್ ಮಾತನಾಡಿ, ಚಿರತೆ ಚಲನವಲನದ ಮೇಲೆ ಅರಣ್ಯ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಈಗಾಗಲೇ ಕೆಲ ಕಡೆ ಬೋನುಗಳನ್ನು ಇರಿಸಿದ್ದೇವೆ. ಇದು ಗೋಪಿನಾಥಂ ಕಡೆಯಿಂದ ಬಂದ ಚಿರತೆಯಾಗಿದ್ದು, ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದೆ. ಚಿರತೆ ಸೆರೆಗೆ ಸತತ ಪ್ರಯತ್ನ ಮಾಡುತ್ತಿದ್ದೇವೆ. ಹೆಜ್ಜೆ ತಂತ್ರಾಂಶದಲ್ಲಿ ಚಿರತೆಯ ಚಲನವನ ಬೆನ್ನತ್ತಿದ್ದೇವೆ. ಚಿರತೆ ಸೆರೆ ಆಗುವವರೆಗೂ ಒಬ್ಬೊಬ್ಬರೆ ಜಮೀನಿಗೆ ಹೋಗಬೇಡಿ. ಮಕ್ಕಳನ್ನು ಹೊರಗೆ ಆಟವಾಡಲು ಬಿಡಬೇಡಿ. ಸಂಜೆ ವೇಳೆ ಓಡಾಡಬೇಡಿ, ಚಿರತೆ ಕಂಡರೇ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಸಾಕು ಪ್ರಾಣಿಗಳ ಸುರಕ್ಷತೆಗೆ ಒತ್ತು ನೀಡಿ ಎಂದು ಸಲಹೆ ನೀಡಿದರು. ಎಸಿಎಫ್ ನಂದಗೋಪಾಲ್, ವಲಯ ಅರಣ್ಯಾಧಿಕಾರಿ ವಾಸು, ಡಿಆರ್‌ಎಫ್‌ಒ ಪ್ರಭುಸ್ವಾಮಿ, ಮಹೇಶ್ ಇತರರು ಇದ್ದರು. ಗುಂಡಾಲ್ ಅರಣ್ಯದಂಚಿನ ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಚಿರತೆ 3 ವರ್ಷದ ಹೆಣ್ಣು ಚಿರತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net