

ಚಾಮರಾಜನಗರ: ಜಾನಪದದ ವಿವಿಧ ಪ್ರಕಾರಗಳನ್ನು ತನ್ನೊಡಲಿನಲ್ಲಿ ಕರಗತ ಮಾಡಿಕೊಂಡಿರುವ ಯುವ ಕಲಾವಿದನೊಬ್ಬ, ಜಂಗಮ ಸಾಂಸ್ಕೃತಿಕ ಕಲಾ ಟ್ರಸ್ಟ್ ಮೂಲಕ ನಾಡಿನಾದ್ಯಂತ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಗರದ ರಾಮಸಮುದ್ರ ಬಡಾವಣೆಯಲ್ಲಿ ಮನೆಗೊಬ್ಬರು ಜಾನಪದ ಕಲಾವಿದರು ಸಿಗುತ್ತಾರೆ. ಅಂತಹ ಜಾನಪದೀಯ ನೆಲೆಯ ಚಿನ್ನಯ್ಯ ಹಾಗೂ ಚೆಲುವಮ್ಮ ದಂಪತಿಯ ಮೂರನೇ ಪುತ್ರನಾದ ಸಿದ್ದರಾಜು(ಸಿದ್ದು ಜಂಗಮ) ಬಾಲ್ಯದಿಂದಲೂ ಜನಪದದ ಬಗ್ಗೆ ಗೀಳು ಅಂಟಿಸಿಕೊಂಡಿದ್ದರು. ಗ್ರಾಮಾಂತರ ಭಾಗಗಳಲ್ಲಿ ನಡೆಯುತ್ತಿದ್ದ ನಾಟಕ, ರಂಗ ಕುಣಿತವನ್ನು ವೀಕ್ಷಿಸುವ ಹವ್ಯಾಸವಿದ್ದ ಸಿದ್ದು ಜಂಗಮ ಗ್ರಾಮದ ಹಿರಿಯರು ಕರಗ ಮಾಡಿಕೊಂಡಿದ್ದ ಜನಪದ ಕಲೆಗಳನ್ನು ಬಾಲ್ಯದಿಂದಲೇ ಅಭ್ಯಾಸಿಸಲು ತೊಡಗಿದರು.
ಈ ಭಾಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ನೀಲಗಾರರ ಪದ, ದೇವರ ಗುಡ್ಡರು, ಜನಪದ ಹಾಡು, ಮಂಟೇಸ್ವಾಮಿ, ಮಹದೇಶ್ವರ, ಬಿಳಿಗಿರಿ ರಂಗಸ್ವಾಮಿ, ಸಂಕಮ್ಮ, ಮಲ್ಲರಾಯನ ಕಥಾ ರೂಪದ ಹಾಡುಗಳ ಜತೆಗೆ ಬೀಸು ಕಂಸಾಳೆ, ಕೋಲಾಟ, ಸುಗ್ಗಿ ಕುಣಿತ, ರಂಗ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ ಮುಂತಾದ ಕಲೆಗಳನ್ನು ಕರಗತ ಮಾಡಿಕೊಂಡರು.
ನೂರಾರು ಕಾರ್ಯಕ್ರಮಗಳಲ್ಲಿ ಜಾನಪದ ಕಂಪು ಹರಡುವ ಮೂಲಕ ನಿಸ್ವಾರ್ಥ ಕಲಾಸೇವೆಗೆ ತಮ್ಮನ್ನು ತಾವು ಮುಡಿಪಾಗಿಸಿಕೊಂಡಿದ್ದಾರೆ. ತಾವು ಕಲಿತಿರುವ ಜಾನಪದ ಕಲೆಯನ್ನು ಯುವ ತಲೆಮಾರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿರುವ ಸಿದ್ದು ಜಂಗಮ, ಜಂಗಮ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಟ್ಟಿ ಉಚಿತವಾಗಿ ಯುವಕ-ಯುವತಿಯರಿಗೆ ತರಬೇತಿಯನ್ನು ನೀಡುವ ಕಲಾಕೈಂಕರ್ಯದಲ್ಲಿ ನಿರತರಾಗಿದ್ದಾರೆ.
ಜಾನಪದದ ಎಲ್ಲ ಪ್ರಕಾರಗಳು ಕರಗತ:
ಜಾನಪದ ವಿವಿಧ ಪ್ರಕಾರಗಳಾದ ಕಂಸಾಳೆ ನೃತ್ಯ, ರಂಗ ಕುಣಿತ, ಮಾರಿ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಪಟ್ಟದ ಕುಣಿತ ಸೇರಿದಂತೆ ಜಾನಪದ ಕಲೆಗಳ ಎಲ್ಲ ಪ್ರಕಾರಗಳನ್ನು ಸಿದ್ದು ಜಂಗಮ ಕರಗತ ಮಾಡಿಕೊಂಡಿದ್ದಾರೆ. ಡೊಳ್ಳು, ತಮಟೆ, ನಗಾರಿ, ತಾಳ-ತಾರ್ಸಿ, ಜಂಬೆ, ಕಂಜರ, ಮೈಸೂರು ನಗಾರಿ, ಕೈದಮಡಿ, ತಬಲ ಸೇರಿದಂತೆ 20ಕ್ಕೂ ಹೆಚ್ಚು ವಾದ್ಯಗಳನ್ನು ನುಡಿಸುತ್ತಾರೆ. ನಾಗಪಟ್ಟರೆ, ಡೊಳ್ಳು ಮುಂತಾದ ಪರಿಕರಗಳನ್ನು ಸ್ವತಃ ಸಿದ್ದು ಜಂಗಮ ಅವರೇ ತಯಾರಿಸುತ್ತಾರೆ. ಕೆಲವು ಚಲನಚಿತ್ರಗಳಲ್ಲಿ ವಸ್ತ್ರ ವಿನ್ಯಾಸಕರಾಗಿ ಹಾಗೂ ನಟರಾಗಿಯೂ ಕೆಲಸ ಮಾಡಿದ್ದಾರೆ. ಕೆಲ ಚಿತ್ರಗಳಲ್ಲಿ ಸಹಾಯಕ ನೃತ್ಯಗಾರರಾಗಿ ಹಾಗೂ ಖಾಸಗಿ ವಾಹಿನಿಯೊಂದರ ಹಾಡುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಾದ್ಯಂತ ಮನೆಮಾತಾಗಿದ್ದರು. ಈ ಮೂಲಕ ಚಾಮರಾಜನಗರದ ಜಾನಪದದ ಸೊಗಡನ್ನು ನಾಡಿಗೆ ಹರಡಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಕಂಪು:
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಜಾನಪದ ಪದವಿ ಪಡೆದುಕೊಂಡಿರುವ ಸಿದ್ದು ಜಂಗಮ 100 ಕ್ಕೂ ಹೆಚ್ಚು ಬಾರಿ ಕಾಲೇಜು ಮಟ್ಟದಲ್ಲಿ, ವಲಯ ಮಟ್ಟದ ಜಾನಪದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜ್ಯಮಟ್ಟದ ಯುವಜನ ಮೇಳ-ಯುವ ಜನೋತ್ಸವದಲ್ಲಿ 26 ಬಾರಿ ಪ್ರಶಸ್ತಿಗಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಸೌಥ್ ಜೋನ್, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂತಾದ ಹೊರ ರಾಜ್ಯಗಳ ಜಾನಪದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. 4 ಬಾರಿ ರಾಷ್ಟ್ರೀಯ ಮಟ್ಟ, ಉತ್ತರ ಪ್ರದೇಶ, ಜಾರ್ಖಂಡ್ ನಲ್ಲಿ ನಡೆದ ದಕ್ಷಿಣ ಏಷ್ಯಾದ ಅಂತಾರಾಷ್ಟ್ರೀಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿದ್ದಾರೆ. 2020ರಲ್ಲಿ ಆದಿ ಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಜನಪದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಉಚಿತ ತರಬೇತಿ:
ಕಳೆದ 20 ವರ್ಷಗಳಿಂದ ಜನಪದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿದ್ದು ಜಂಗಮ ಅವರು, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಸಿದ್ದು ಜಂಗಮ ಸಾಂಸ್ಕೃತಿಕ ಕಲಾ ಟ್ರಸ್ಟ್ ಸ್ಥಾಪಿಸಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಜಾನಪದ ಪ್ರಕಾರಗಳ ತರಬೇತಿ ನೀಡುತ್ತಿದ್ದಾರೆ. ಮಾರ್ಗದರ್ಶಕ ಸುಂದರೇಶ್, ಸಹ ಕಲಾವಿದರಾದ ಕೃಷ್ಣಮೂರ್ತಿ, ಭರತ್, ಮನು ಮೋಹನ್, ಚೇತನ್, ಲೋಕೇಶ್, ರವಿ, ಚೇತನ್, ಶಶಾಂಕ್ ಇತರರು ಇವರ ಕಲಾ ಸೇವೆಗೆ ಹೆಗಲಾಗಿ ನಿಂತಿದ್ದಾರೆ. ಜಾನಪದ ಕಲೆಗಳನ್ನು ಕಲಿಯುವ ಆಸಕ್ತರು ಸಿದ್ದು ಜಂಗಮ-9036363170 ಅವರನ್ನು ಸಂಪರ್ಕಿಸಬಹುದಾಗಿದೆ.
ಇತ್ತೀಚೆಗೆ ಜನಪದ ಕಲೆಗಳನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಯುವ ಪೀಳಿಗೆಗೆ ಅರಿವು ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಯುವಜನಾಂಗ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು.ಸಿದ್ದು ಜಂಗಮ, ಜಾನಪದ ಕಲಾವಿದ, ರಾಮಸಮುದ್ರ, ಚಾಮರಾಜನಗರ