

ಹನೂರು: ಲೋಕಸಭೆ ಚುನಾವಣೆಯಲ್ಲಿ ಸುನೀಲ್ ಬೋಸ್ ಅವರ ಗೆಲುವಿಗೆ ಹನೂರು ಕ್ಷೇತ್ರದಿಂದ ಅಧಿಕ ಮತಗಳನ್ನು ಕೊಡಿಸಿರುವ ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಸರ್ಕಾರದಲ್ಲಿ ಅವಕಾಶ ಕಲ್ಪಿಸಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಸಿ.ಮಹದೇವಪ್ಪ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮನವಿ ಆಲಿಸಿ ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಸತತ 3 ಬಾರಿ ಜಯ ಗಳಿಸಿದ್ದ ಆರ್.ನರೇಂದ್ರ ಅವರು ಈ ಬಾರಿ ಕೆಲ ಕಾರಣಾಂತರದಿಂದ ಸೋಲಬೇಕಾಯಿತು. ಆದರೂ ಕಾರ್ಯಕರ್ತರು ಹಾಗೂ ಮುಖಂಡರನ್ನು ಹುರಿದುಂಬಿಸುವುದರ ಮೂಲಕ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದರು. ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಮುತುವರ್ಜಿ ವಹಿಸಿದ್ದರು. ಜತೆಗೆ ಸದಾ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇದರ ಫಲ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಅವರಿಗೆ ಹನೂರು ಕ್ಷೇತ್ರದಿಂದಲೇ 37 ಸಾವಿರ ಅಧಿಕ ಮತಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಹಾಗಾಗಿ ಕ್ಷೇತ್ರದಲ್ಲಿ ಇಷ್ಟು ಮತಗಳ ಅಂತರ ಯಾವ ಲೋಕಸಭೆ ಚುನಾವಣೆಯಲ್ಲೂ ಕಂಡಿರಲಿಲ್ಲ. ಇದಕ್ಕೆ ತಮ್ಮೆಲ್ಲರ ಒಗ್ಗಟ್ಟು ಹಾಗೂ ಪರಿಶ್ರಮ ಅಪಾರ. ಆದ್ದರಿಂದ ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ಕಲ್ಪಿಸಿ ಕೊಡುವ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಹನೂರು ಕ್ಷೇತ್ರ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ. ಆದರೆ ಇಲ್ಲಿನ ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಜನರ ಬೆಂಬಲಕ್ಕೆ ತಕ್ಕಂತೆ ಸರ್ಕಾರದ ಯೋಜನೆಗಳನ್ನು ಮಂಜೂರು ಮಾಡಿಸಿ ಎಲ್ಲರೂ ಒಟ್ಟಿಗೆ ಸೇರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕ್ಷೇತ್ರದಲ್ಲಿ ಸುನೀಲ್ ಬೋಸ್ ಅವರಿಗೆ ಹೆಚ್ಚು ಮತಗಳನ್ನು ಕೊಡಿಸುವುದರ ಮೂಲಕ ಸೋತಿದ್ದರೂ ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಉತ್ತಮ ಸಹಕಾರ ನೀಡಿದ್ದೀರಾ. ಇದರಿಂದ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವಾಗಿದೆ. ಹಾಗಾಗಿ ಬೋಸ್ ಅವರು 1.88 ಲಕ್ಷ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಯಿತು. ನಿಮ್ಮ ಸಹಕಾರ ಇದೇ ಮುಂದುವರಿಯಲಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಇದೇ ವೇಳೆ ಕಾರ್ಯಕರ್ತರು ಸಚಿವರನ್ನು ಸನ್ಮಾನಿಸಿದರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಆರ್.ನರೇಂದ್ರ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮುಕುಂದವರ್ಮ, ಕೆಪಿಸಿಸಿ ಸದಸ್ಯ ಬಸವರಾಜು ಇತರರು ಇದ್ದರು.