ಮೂಕನಪಾಳ್ಯದಲ್ಲಿ ಶ್ರೀಲಕ್ಷ್ಮೀದೇವಿ ಜಾತ್ರೆ

15raju1
Published on

ಚಾಮರಾಜನಗರ: ತಾಲೂಕಿನ ಮೂಕನಪಾಳ್ಯ ಗ್ರಾಮದಲ್ಲಿ ಬುಧವಾರ ಶ್ರೀಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಜಾತ್ರೆಯ ಪ್ರಯುಕ್ತ ದೇವಾಲಯ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಮತ್ತು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮಂಗಳವಾರ ರಾತ್ರಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಿರುದುಗಳನ್ನು ವಾದ್ಯಮೇಳದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.

ರಾತ್ರಿ 10 ಗಂಟೆಗೆ ತಮಿಳುನಾಡು ತಂಡದವರಿಂದ ಆರ್ಕೆಸ್ಟ್ರಾ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ತಡರಾತ್ರಿ ಕೊಂಡಕ್ಕೆ ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡಲಾಯಿತು. ಬುಧವಾರ ಬೆಳಗಿನ ಜಾವ 5 ಗಂಟೆಗೆ ಬಾನವಾಡಿ ಗ್ರಾಮದ ಹೊಳೆಗೆ ತೆರಳಿ ಪೂಜೆ ಸಲ್ಲಿಸಿ, ಸತ್ತಿಗೆ, ಸೂರಿಪಾನಿ, ವಾದ್ಯ ಮೇಳದೊಂದಿಗೆ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಬರಲಾಯಿತು.

ಈ ವೇಳೆ ನೆರೆದಿದ್ದ ಗ್ರಾಮಸ್ಥರು, ಭಕ್ತರು ಸತ್ತಿಗೆ ಪೂಜೆ ಸಲ್ಲಿಸಿ, ಹೂವಿನ ಹಾರಗಳನ್ನು ಹಾಕುವ ಮೂಲಕ ಹರಕೆ ತೀರಿಸಿದರು. ನಂತರ ದೇವಸ್ಥಾನದ ಮುಂಭಾಗದಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಕೊಂಡವನ್ನು ದೇವರ ಗುಡ್ಡರು, ಸತ್ತಿಗೆ ಹೊತ್ತಿದ್ದ ಭಕ್ತರು ಕೊಂಡಹಾಯ್ದರು. ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸತ್ತಿಗೆ, ಸೂರಿಪಾನಿ, ಲಂಬಾಣಿ ನೃತ್ಯ, ಲಗಾರಿ ಮೇಳದೊಂದಿಗೆ ಸಕಲ ಬಿರುದುಗಳ ಸಮೇತ ತಂಪಿನ ಮೆರವಣಿಗೆ ನಡೆಯಿತು. ಈ ವೇಳೆ ಯುವಕ , ಯುವತಿಯರು ಮತ್ತು ಮಹಿಳೆಯರು ನಗಾರಿ ಸದ್ದಿಗೆ ಹೆಜ್ಜೆ ಹಾಕಿದರು. ನೆರೆಯ ಗ್ರಾಮಗಳಿಂದ ಜನರು ಆಗಮಿಸಿದ್ದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಉತ್ಸವದಲ್ಲಿ ಪಾಲ್ಗೊಂಡರು. ಯಜಮಾನರಾದ ಶಿವರಾಜು ನಾಯ್ಕ, ಟಿ.ಕುಮಾರ್ ನಾಯ್ಕ, ಸಿದ್ದು ನಾಯ್ಕ, ಉಲ್ಲೇಶ್ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಿಬಾಯಿ ಗಣೇಶ್‌ನಾಯ್ಕ, ಮಮತಾ ಮುತ್ತುರಾಜು, ಮುಖಂಡರಾದ ಶಿವಪ್ಪ ನಾಯ್ಕ, ನಾಗೇಶ್ ನಾಯ್ಕ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net